ಮಡಿಕೇರಿ, ಜ. 12: ಪಕ್ಷದೊಳಗಿನ ಆಂತರಿಕ ವಿಚಾರಗಳು ಮಾಧ್ಯಮಗಳ ಮೂಲಕ ಬಹಿರಂಗವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಸಭೆಯಲ್ಲಿ ಚರ್ಚೆಯಾಗಿ ಗದ್ದಲವುಂಟಾಗಿರುವ ಬಗ್ಗೆ ತಿಳಿದು ಬಂದಿದೆ.ಬಿಜೆಪಿ ಕಾರ್ಯಕಾರಿಣಿ ಸಭೆ ಇಂದು ಪಕ್ಷದ ಕಚೇರಿಯಲ್ಲಿ ನಡೆದಿದೆ. ಸಭೆಯಲ್ಲಿ ಶಾಸಕರುಗಳಾದಿಯಾಗಿ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ನೀಡದಂತೆ ಪಕ್ಷದವರೇ ನಡೆಸಿದ ಸಭೆಯ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಗೊಂಡಿದೆ.

ಆಂತರಿಕ ವಿಚಾರ ಬಹಿರಂಗ - ಗದ್ದಲ

(ಮೊದಲ ಪುಟದಿಂದ)ಅಲ್ಲದೇ ಜೆಡಿಎಸ್‍ನ ಪ್ರಮುಖರಾದ ವಿಜಯ್ ಹಾಗೂ ಭರತ್‍ಕುಮಾರ್ ಅವರುಗಳ ಸೇರ್ಪಡೆ ವಿಚಾರ ಪಕ್ಷದ ವರಿಷ್ಠರಿಗೆ ಸಂಬಂಧಿಸಿದ್ದಾಗಿದ್ದು, ಈ ಬಗ್ಗೆ ಕಾರ್ಯಕರ್ತರು ಚರ್ಚಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಗೊಂಡಿದೆ.

ಇನ್ನೂ ಮುಂದಕ್ಕೆ ಯಾವದೇ ಕಾರಣಕ್ಕೂ ಪಕ್ಷದ ಆಂತರಿಕ ವಿಚಾರವನ್ನು ಯಾರೂ ಕೂಡ ಮಾಧ್ಯಮಗಳಿಗೆ ತಿಳಿಸಬಾರದೆಂಬ ಬಗ್ಗೆ ಚರ್ಚೆಯಾಗಿ ತೀರ್ಮಾನವಾಗಿದೆ. ಆದರೆ, ಮಾಧ್ಯಮಗಳಿಗೆ ಮಾಹಿತಿ ನೀಡುವದನ್ನು ತಡೆಯಲಾಗದು ಯಾರಾದರೊಬ್ಬ ನೀಡಿಯೇ ನೀಡುತ್ತಾರೆ ಎಂಬ ಬಗ್ಗೆ ಕೂಡ ಪ್ರಸ್ತಾಪವಾಗಿದೆ.

ಚುನಾವಣೆ ಹಿನ್ನೆಲೆ ಅಭ್ಯರ್ಥಿ ಆಯ್ಕೆ ವರಿಷ್ಠರಿಗೆ ಬಿಟ್ಟಿದ್ದು, ಈ ಬಗ್ಗೆ ಯಾರೂ ಕೂಡ ಹೇಳಿಕೆ ನೀಡಬಾರದೆಂದು ತೀರ್ಮಾನವಾಗಿದ್ದು, ಈವರೆಗಿನ ಎಲ್ಲ ಗೊಂದಲಗಳ ಬಗ್ಗೆ ಪಕ್ಷದ ಅಧ್ಯಕ್ಷ ಭಾರತೀಶ್ ಅವರು ಸ್ಪಷ್ಟೀಕರಣ ನೀಡಬೇಕೆಂದು ಸಭೆಯಲ್ಲಿ ತೀರ್ಮಾನವಾಗಿರುವ ಬಗ್ಗೆ ತಿಳಿದು ಬಂದಿದೆ.