ಕುಶಾಲನಗರ, ಜ. 12: ಕುಶಾಲನಗರ ಸರಕಾರಿ ಆರೋಗ್ಯ ಸಮುದಾಯ ಕೇಂದ್ರದ ರಕ್ಷಾ ಸಮಿತಿ ಸಭೆ ನಡೆಯಿತು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಕಾರ್ಯವೈಖರಿ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಹಲವು ಸಮಯದಿಂದ ಸಮಿತಿ ಸಭೆ ಕರೆಯದೆ ನಿರ್ಲಕ್ಷ್ಯ ತಾಳಿದ ವೈದ್ಯಾಧಿಕಾರಿಗಳನ್ನು ಪ್ರತಿನಿಧಿಗಳು ತರಾಟೆಗೆ ತೆಗೆದುಕೊಂಡರು.
ರಕ್ಷಾ ಸಮಿತಿಯಲ್ಲಿ ಅನುದಾನವಿದ್ದರೂ ಆಸ್ಪತ್ರೆಗೆ ಬೇಕಾದ ಸವಲತ್ತುಗಳನ್ನು ಕಲ್ಪಿಸದೆ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿರುವ ವೈದ್ಯರ ನಡವಳಿಕೆ ಬಗ್ಗೆ ದೂರುಗಳ ಹಿನ್ನೆಲೆ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಲು ಸೂಚನೆ ನೀಡಲಾಯಿತು.
ಬಡ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದು, ರಕ್ತ ಮತ್ತಿತರ ಪರೀಕ್ಷೆಗಳಿಗೆ ಖಾಸಗಿ ಘಟಕಗಳಿಗೆ ರೋಗಿಗಳನ್ನು ಸಾಗಹಾಕುವದು, ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸುವದು ಮುಂತಾದ ದೂರುಗಳು ಕೇಳಿಬಂದವು.
ಈ ಸಂದರ್ಭ ಕಾರ್ಯಕಾರಿ ಮಂಡಳಿಯ ಮತ್ತು ರಕ್ಷಾ ಸಮಿತಿಯ ಸಾಮಾನ್ಯ ಸಭೆಯ ವರದಿಯನ್ನು ವಾಚಿಸಲಾಯಿತು. ಸಭೆಯ ಬಗ್ಗೆ ಸ್ಥಳೀಯ ಪತ್ರಿಕಾ ಮಾಧ್ಯಮ ಸದಸ್ಯರಿಗೆ ಮಾಹಿತಿ ನೀಡದಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಅವರಿಗೆ ಮೌಖಿಕ ದೂರು ನೀಡಿದ ಹಿನ್ನೆಲೆ ಮುಂದಿನ ಸಭೆಗೆ ಮುನ್ನ ಮಾಹಿತಿ ಒದಗಿಸುವಂತೆ ಆಸ್ಪತ್ರೆಯ ವೈದ್ಯಾಧಿಕಾರಿಗೆ ಸೂಚಿಸಿದರು. ಸಭೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಸಮಿತಿ ಸದಸ್ಯರಾದ ಜೋಸೆಫ್ ವಿಕ್ಟರ್ ಸೋನ್ಸ್, ಕೆ.ಎನ್. ಅಶೋಕ್ ಕುಮಾರ್, ವೈದ್ಯಾಧಿಕಾರಿ ಕೀರ್ತಿರಾಜು ಮತ್ತು ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.