ಶ್ರೀಮಂಗಲ, ಜ. 12: ಕೃಷಿ ಹಾಗೂ ತೋಟಗಾರಿಕ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಸೇರಿದಂತೆ ಹಲವು ಸವಾಲುಗಳಿಂದ ಈ ಕ್ಷೇತ್ರದತ್ತ ನಿರಾಶಕ್ತಿಯೊಂದಿಗೆ ಕಂಗೆಟ್ಟಿರುವ ಬೆಳೆಗಾರರಿಗೆ, ನೂತನವಾಗಿ ಕಾಫಿ ಶುದ್ಧಿಕರಿಸುವ ಹೊಸ ಯಂತ್ರವನ್ನು ಅವಿಷ್ಕಾರ ಮಾಡಲಾಗಿದೆ.
ಪೊನ್ನಂಪೇಟೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಸ್ಥಳೀಯ ವಿದ್ಯಾರ್ಥಿಗಳ ತಂಡ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದೆ.
ಕಾಫಿ ಶುದ್ದೀಕರಣ ಯಂತ್ರ: ಪೊನ್ನಂಪೇಟೆಯ ಹಳ್ಳಿಗಟ್ಟು ನಿವಾಸಿಯಾದ ಚೇಂದಿರ ಡಾರ್ವಿನ್ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ, ಪೊನ್ನಂಪೇಟೆಯ ಸಿ.ಐ.ಟಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಬಿ.ಜಿ. ನಿತಿನ್, ತಾಪನೆರ ಎಸ್. ಬೆಳ್ಳಿಯಪ್ಪ ಮತ್ತು ಉಳುವಂಗಡ ಅಮಿತ್ ಬೋಪಣ್ಣ ಈ ಯಂತ್ರವನ್ನು ತಯಾರಿಸಿದ್ದಾರೆ.
ಈ ವಿದ್ಯುತ್ ಚಾಲಿತ ಯಂತ್ರವು ಗಂಟೆಗೆ ಇಪ್ಪತ್ತೈದು ಚೀಲ ಕಾಫಿಯನ್ನು ಶುದ್ಧೀಕರಿಸುವ ಸಾಮಥ್ರ್ಯವನ್ನು ಹೊಂದಿದೆ. ಈಗಾಗಲೇ ಈ ಯಂತ್ರದ ಪ್ರಾತ್ಯಕ್ಷಿಕೆ ಹಲವೆಡೆ ನಡೆಯುತ್ತಿದ್ದು ಬೆಳೆಗಾರರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಯಂತ್ರಕ್ಕೆ ಒಣ ಕಾಫಿ ಹಾಕಿದರೆ ಕಾಫಿಯಲ್ಲಿರುವ ಮಣ್ಣು ಹಾಗೂ ಇತರ ಕಸಕಡ್ಡಿಗಳನ್ನು ಬೇರ್ಪಡಿಸಿ ಶುದ್ಧವಾದ ಕಾಫಿಯನ್ನು ಒಂದು ಜಾಗಕ್ಕೆ ಕಸಕಡ್ಡಿ ಮಿಶ್ರಿತ ಅಂಶವನ್ನು ಇನ್ನೊಂದು ಬದಿಗೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಇದರ ಪ್ರಾತ್ಯಕ್ಷಿಕೆ ಹಾಗೂ ಯಂತ್ರದ ಬಗ್ಗೆ ಹೆಚ್ಚಿನ ವಿವರಗಳಿಗೆ ಸಂಶೋಧನೆ ನಡೆಸಿದ ಯುವಕರ ತಂಡವನ್ನು ಈ ದೂರವಾಣಿ (9480161184, 7406831395, 9483308469) ಮೂಲಕ ಸಂಪರ್ಕಿಸಬಹುದು.