ಸೋಮವಾರಪೆಟೆ,ಜ.13: ದಕ್ಷಿಣ ಭಾರತದ ಪ್ರಮುಖ ವಿದ್ಯಾಸಂಸ್ಥೆಯಾದ ಜಾಮಿಅ ಸದಿಯಾದ ಸ್ಥಾಪಕ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ, ವಿಧಿವಶರಾಗಿರುವ ಉಲ್ಲಾಳದ ತಾಜುಲ್ ಉಲಮಾ ಹಾಗೂ ಕಾಸರಗೋಡಿನ ನೂರುಲ್ ಉಲಾಮರವರುಗಳ ಸಂಸ್ಮರಣ ದಿನಾಚರಣೆಯನ್ನು ತಾ. 14 ರಿಂದ (ಇಂದಿನಿಂದ) 16 ವರೆಗೆ ಆಚರಿಸಲಾಗುತ್ತಿದೆ ಎಂದು ತಾಜುಲ್ ಉಲಮಾ ನೂರುಲ್ ಉಲಮಾ ಆಂಡ್ ನೇರ್ಚೆ ಪ್ರಚಾರ ಸಮಿತಿಯ ಜಿಲ್ಲಾ ಸಂಚಾಲಕ ತಣ್ಣೀರುಹಳ್ಳದ ಶಾಫೀ ಸಹದಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಜುಲ್ ಉಲಮಾ ಸಯ್ಯಿದ್ ಅಬ್ದುಲ್ರಹ್ಮಾನ್ ಆಲ್ ಬುಖಾರಿಯವರು ಉಳ್ಳಾಲ ತಂಙಲ್ ಎಂದೇ ಖ್ಯಾತಿಯಾಗಿದ್ದರು. ಕೇರಳ, ಕರ್ನಾಟಕ ರಾಜ್ಯಗಳಲ್ಲಿನ ನೂರಾರು ಮೊಹಲ್ಲಾಗಳಿಗೆ ಖಾಝಿಯಾಗಿದ್ದ ಇವರು, ಸಮಸ್ತ ಉಲಾಮ ಒಕ್ಕೂಟದ ಅಧ್ಯಕ್ಷರಾಗಿ ಸುದೀರ್ಘಕಾಲ ಸೇವೆ ಸಲ್ಲಿಸಿದ್ದರು. ಇವರುಗಳ ಸಂಸ್ಮರಣೆಯನ್ನು ಕೇರಳ ಸೇರಿದಂತೆ ನಮ್ಮ ರಾಜ್ಯದಲ್ಲಿ ಆಚರಿಸಲಾಗುತ್ತಿದೆ ಎಂದರು.

ಅದರಂತೆ ನೂರುಲ್ ಉಲಾಮರವರು ಅಬ್ದುಲ್ ಖಾದಿರ್ ಮುಸ್ಲಿಯಾರ್ ತಾಜುಲ್ ಉಲಾಮರ ಕಾಲಾನಂತರ ಸಮಸ್ತ ಉಲಾಮಾ ಮದ್ರಸಗಳನ್ನು ಆಧುನಿಕತೆಯ ವ್ಯವಸ್ಥೆಯೆಡೆಗೆ ಕೊಂಡೊಯ್ದ ಶಿಲ್ಪಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಇವರು, ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷರಾಗಿ, ಇಸ್ಲಾಮೀ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಾಕಷ್ಟು ಗ್ರಂಥಗಳನ್ನು ರಚಿಸಿರುವ ನೂರುಲ್ ಉಲಮಾ ರವರು 2015ರಲ್ಲಿ ವಿಧಿವಶರಾದರು.

ಈ ಈರ್ವರು ತಮ್ಮ ಜೀವನವನ್ನೇ ಸಮಾಜಕ್ಕಾಗಿ ಮುಡಿಪಾಗಿಟ್ಟವರಾಗಿದ್ದು ಇವರುಗಳ ತತ್ವಾದರ್ಶಗಳನ್ನು ಇಂದಿನ ಸಮಾಜಕ್ಕೆ ಪರಿಚಯಿಸುವ ಸಲುವಾಗಿ ತಾ. 14ರಂದು ರಾಜ್ಯದ ಎಲ್ಲಾ ಮದ್ರಸಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಾರ್ಥನಾ ದಿನವನ್ನಾಗಿ ಆಚರಿಸಲಾಗುವದು ಎಂದರು.

ಕಾಸರಗೋಡು ಜಾಮಿಅ ಸಅದಿಯ್ಯದಲ್ಲಿ ತಾ. 16ರವರೆಗೆ ನಿರಂತರವಾಗಿ ಕಾರ್ಯಕ್ರಮಗಳು ನಡೆಯಲಿದ್ದು, ಇಂದು ಪೂರ್ವಾಹ್ನ 10 ಗಂಟೆಗೆ ನಡೆಯಲಿರುವ ಕುಟುಂಬ ಸಂಗಮ ಕಾರ್ಯಕ್ರಮದಲ್ಲಿ ಮನಶಾಸ್ತ್ರಜ್ಞ ಡಾ. ಮುಹ್ಸಿನ್ ಉಪನ್ಯಾಸ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಅನುಸ್ಮರಣಾ ಕಾರ್ಯಕ್ರಮ ವನ್ನು ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ ಎಂದರು.

ತಾ.15ರ ಸಂಜೆ ಹಾಫಿಝ್ ಪಾಳಿಲಿ ಗೂಡಲ್ಲೂರು ನೇತೃತ್ವದಲ್ಲಿ ಬುರ್ದಾ ಆಲಾಪನೆ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಎಸ್‍ವೈಎಸ್ ಅಧ್ಯಕ್ಷ ಕೊಳಕೇರಿ ಹಫೀಳ್ ಸಅದಿ, ಕಲ್ಕಂದೂರಿನ ಆಲೀ ಸಖಾಫಿ, ಸೋಮವಾರಪೇಟೆ ಬ್ರಾಂಚ್ ಅಧ್ಯಕ್ಷ ಕೆ.ಎ. ಉಸ್ಮಾನ್, ಕೊಡ್ಲಿಪೇಟೆಯ ಶರೀಫ್ ಸಅದಿ ಹಾಗೂ ಕರ್ಕಳ್ಳಿ ಮದ್ರಸದ ಅಧ್ಯಕ್ಷ ಅಬ್ಬಾಸ್ ಉಪಸ್ಥಿತರಿದ್ದರು.