ಮಡಿಕೇರಿ, ಜ.12 : ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆ ಈ ಬಾರಿ ತಾ.13 ರಿಂದ (ಇಂದಿನಿಂದ) 17ರವರೆಗೆ ನಡೆಯಲಿದೆ. ಜ.16 ರಂದು 59ನೇ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಮುಖರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಜಿ. ಮೇದಪ್ಪ ಅವರು 5 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ತಾ.13 ರಂದು (ಇಂದು) “ಬೆಳ್ಳಿ ಬಂಗಾರ ದಿನ”ದ ಮೂಲಕ ನಡೆಯಲಿದೆ.ಸಂಜೆ 6.30 ರಿಂದ 7.30ರ ವರೆಗೆ ಜಾತ್ರಾ ಪ್ರಾರಂಭೋತ್ಸವ ಪೂಜೆ, ತಾ.14 ರಂದು (ನಾಳೆ) “ಮಕರ ಸಂಕ್ರಮಣ ಕರುವಿನ ಹಬ್ಬ”ವನ್ನು ಆಚರಿಸಲಾಗುತ್ತಿದ್ದು, ರಾತ್ರಿ 7 ಗಂಟೆಗೆ ಗರುಡ ಕಂಬದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪವನ್ನು ಬೆಳಗಿಸುವದು ಮತ್ತು ಅಂಕುರಾರ್ಪಣ ಪೂಜೆ, ಮಹಾಮಂಗಳಾರತಿ, ಪ್ರಾರ್ಥನೆ, ಪ್ರಸಾದ ಸ್ವೀಕಾರ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ತಾ.15 ರಂದು ಪೂರ್ವಾಹ್ನ 11.50 ರಿಂದ 1.20ರ ವರೆಗೆ ಅರಸು ಬಲಿ ಸೇವೆ ನಡೆಸಲಾವದು. ಸಾಮೂಹಿಕ ಪ್ರದಕ್ಷಿಣೆ ಮತ್ತು ಪೂಜೆಯ ನಂತರ ಶ್ರೀ ಕುಮಾರಲಿಂಗೇಶ್ವರಸ್ವಾಮಿಗೆ ಫಲ, ತಾಂಬೂಲ, ದವಸ, ಧಾನ್ಯ, ಕಾಣಿಕೆ ಹರಕೆಗಳನ್ನು ಸಲ್ಲಿಸುವದು ಮತ್ತು ಸ್ವಕ್ಷೇತ್ರಗಳಿಗೆ ಪುನೀತ ಮನೋಭಾವನೆಯಿಂದ ತೆರಳುವದು, ಅಂದು ರಾತ್ರಿ 7.30 ರಿಂದ ಗಣಹೋಮ, ರಂಗಪೂಜೆ, ಬೀದಿಉತ್ಸವ, ಮಹಾಮಂಗಳಾರತಿ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ತಾ.16 ರಂದು ಮಧ್ಯಾಹ್ನ 12.5ಕ್ಕೆ ಶ್ರೀ ಕುಮಾರಲಿಂಗೇಶ್ವರಸ್ವಾಮಿಯ 59ನೇ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಸಂಜೆ 6 ಗಂಟೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಾಟಕ ಆಯೋಜಿಸಲಾಗಿದ್ದು, ರಾತ್ರಿ 7 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ತಾ.17 ರಂದು ಬೆಳಗ್ಗೆ 10 ಗಂಟೆಯಿಂದ 12.30 ರ ವರೆಗೆ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಧ್ಯಾಹ್ನ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕುಮಾರಲಿಂಗೇಶ್ವರ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಜಿ.ಎಲ್.ರಘುಕುಮಾರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸೋಮವಾರಪೇಟೆ ತಾ.ಪಂ. ಸದಸ್ಯ ಬಿ.ಎ.ಧರ್ಮಪ್ಪ, ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಕುಶಾಲನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯ ಕೆ.ಕೆ. ಗೋಪಾಲ್ ಪಾಲ್ಗೊಳ್ಳಲಿದ್ದಾರೆ ಎಂದರು.

ತಾ.15 ಮತ್ತು 16 ರಂದು 59ನೇ ಮಹಾರಥೋತ್ಸವದ ಪ್ರಯುಕ್ತ ಅಂತರ್ ಜಿಲ್ಲಾ ಮಟ್ಟದ ಪುರುಷರ ಕಬ್ಬಡ್ಡಿ, ಮಹಿಳೆಯರ ಥ್ರೋಬಾಲ್ ಹಾಗೂ ಹಗ್ಗಜಗ್ಗಾಟ, ಪುರುಷರಿಗೆ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಎಸ್.ಜಿ.ಮೇದಪ್ಪ ಮಾಹಿತಿ ನೀಡಿದರಲ್ಲದೆ, ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಭಾಗವಹಿಸುವವರು ಕೆ.ಟಿ. ಮಧುಕುಮಾರ -8277131355 ಸಂಪರ್ಕಿಸ ಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಎಸ್.ರಘುಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಕೆ.ಪರಮೇಶ ವಿಜಯ ಹಾಗೂ ಖಜಾಂಚಿ ಡಿ.ಎಸ್.ಲಿಂಗರಾಜು ಉಪಸ್ಥಿತರಿದ್ದರು.