ಸಿದ್ದಾಪುರ, ಜ. 13: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಸಂಘಪರಿವಾರ ಹಿಂಸಾ ರಾಜಕೀಯದಲ್ಲಿ ನಿರತರಾಗಿದೆ ಎಂದು ಆರೋಪಿಸಿ ಎಸ್‍ಡಿಪಿಐ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಎಸ್.ಡಿ.ಪಿ.ಐ ಕಾರ್ಯಕರ್ತರು, ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಮುಸ್ತಫ ಮಾತನಾಡಿ, ವಿಜಯಪುರದ ವಿದ್ಯಾರ್ಥಿನಿ ದಾನಮ್ಮ ಅತ್ಯಾಚಾರ ಕೊಲೆ, ದಕ್ಷಿಣ ಕನ್ನಡದ ದೀಪಕ್ ರಾವ್ ಮತ್ತು ಬಶೀರ್ ಹತ್ಯೆ ಹಾಗೂ ಮೂಡಿಗೆರೆಯ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ನೈತಿಕ ಪೊಲೀಸ್‍ಗಿರಿ ಮಿತಿಮೀರುತ್ತಿದ್ದು, ಈ ಎಲ್ಲಾ ಘಟನೆಗಳ ಆರೋಪಿಗಳು ಸಂಘಪರಿವಾರ ಸಂಘಟನೆಗಳ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರಾಗಿದ್ದಾರೆ ಎಂದು ಆರೋಪಿಸಿದರು. ಧರ್ಮಗಳ ನಡುವೆ ಕಂದಕ ನಿರ್ಮಿಸಿ ಕೋಮು ದ್ರುವೀಕರಣದ ಮೂಲಕ ಸಂಘಪರಿವಾರದ ನೇತೃತ್ವದಲ್ಲಿ ಬಿಜೆಪಿ ಮತ ಭೇಟೆಗೆ ಮುಂದಾಗಿದ್ದು, ಇದರ ಬಗ್ಗೆ ಮತದಾರರು ಎಚ್ಚರಿಕೆಯಿಂದಿರಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಸಿದ್ದಾಪುರ ಘಟಕದ ಅಧ್ಯಕ್ಷ ಶಾಹುಲ್, ಸಿದ್ದಾಪುರ ಗ್ರಾ.ಪಂ ಸದಸ್ಯ ಶೌಕತ್ ಅಲಿ, ನೆಲ್ಯಹುದಿಕೇರಿ ಗ್ರಾ.ಪಂ ಸದಸ್ಯ ಸಂಶೀರ್, ಕಾರ್ಯಕರ್ತರಾದ ಹನೀಫ್, ಬಶೀರ್, ಅಫ್ಸಲ್ ಸೇರಿದಂತೆ ಇತರರು ಇದ್ದರು.