ವೀರಾಜಪೇಟೆ, ಜ. 13: ಐಎಎಸ್, ಐಪಿಎಸ್ ಮಾಡಲು ಉತ್ಸುಕರಾಗಿರುವ ಕೊಡಗಿನ ಅರ್ಹ ಮಕ್ಕಳಿಗೆ ಅರ್ಧದಷ್ಟು ಧನಸಹಾಯ ಮಾಡಲು ಕೊಡವ ವಿದ್ಯಾನಿಧಿ ಮುಂದಾಗಿದೆ ಎಂದು ನಿಧಿಯ ಅಧ್ಯಕ್ಷ ಬಿವಿಬಿಕೆವಿ ಉಪಾಧ್ಯಕ್ಷ ಕೆ.ಪಿ. ಉತ್ತಪ್ಪ ಹೇಳಿದರು.

ಬೆಂಗಳೂರಿನಲ್ಲಿರುವ ಹೆಸರು ನೀಡಲು ಬಯಸದ ದಾನಿಯೊಬ್ಬರು ಈ ಉದ್ದೇಶಕ್ಕಾಗಿ ಎರಡೂವರೆ ಕೋಟಿ ರೂಪಾಯಿ ನೀಡಿದ್ದು, ಪ್ರತಿವರ್ಷ ಹದಿನೈದು ಲಕ್ಷ ರೂಪಾಯಿ ನೀಡುವರು ಎಂದರು.

ಇಂದು ಇಲ್ಲಿನ ಕಾವೇರಿ ಕಾಲೇಜಿನಲ್ಲಿ ದಿವಂಗತ ಕೂತಂಡ ಪೂವಯ್ಯ ಮತ್ತು ಪಾರ್ವತಿ ಪೂವಯ್ಯ ಜ್ಞಾಪಕಾರ್ಥ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಹುಟ್ಟು ಹಬ್ಬದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಿ ಮಾತನಾಡಿದರು. ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳ ಬೇಕೆಂದು ಕರೆ ನೀಡಿದ ಅವರು, ‘ಶೃದ್ಧೆ’ ಇದ್ದಲ್ಲಿ ಏನನ್ನೂ ಸಾಧಿಸಬಹುದು ಎಂದರು.

ಗೌರವ ಅತಿಥಿಯಾಗಿದ್ದ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ ವಿಶ್ವದ ಅದ್ಭುತಗಳನ್ನು ಕಣ್ಣು-ಬಾಯಿ ಬಿಟ್ಟು ನೋಡುವ ನಾವು ಅದನ್ನು ಸೃಷ್ಟಿಸಿರುವದು ನಾವೇ ಎಂಬ ಸತ್ಯ ಅರಿಯಲು ಮರೆತಿದ್ದೇವೆ ಎಂದರು. ವಿವೇಕಾನಂದರು ಹೇಳುವಂತೆ ಇಡೀ ಸಮುದ್ರದ ನೀರು ಕುಡಿಯಬಲ್ಲೆ, ಶಿಖರಗಳನ್ನು ಕೆಡವ ಬಲ್ಲೆ ಎಂಬ ದೃಢ ವಿಶ್ವಾಸ ನಮ್ಮಲ್ಲಿ ಇರಬೇಕೆಂದರು. ವ್ಯಕ್ತಿತ್ವ ಬೆಳೆದಷ್ಟು ತಗ್ಗಿ ನಡೆಯಬೇಕು ಎಂದು ಕಿವಿಮಾತು ಹೇಳಿದ ಅವರು, ನಮ್ಮಲ್ಲಿ ಕ್ರಿಯಾತ್ಮಕತೆ ಇಲ್ಲದಿದ್ದರೆ ಹುಲ್ಲು-ಕಡ್ಡಿ ನಾಶಕ್ಕೆ ಒಳಗಾಗುವಂತೆ, ಸಮಾಜದಲ್ಲಿ ನಮಗೆ ಬೆಲೆ ಇಲ್ಲದಾಗುತ್ತದೆ ಎಂದರು.

ವಿವೇಕಾನಂದರ ಕುರಿತು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಅದ್ಭುತವಾಗಿ ಭಾಷಣ ಪ್ರದರ್ಶಿಸಿದರು. ಪ್ರಿಯಾ ಮುದ್ದಪ್ಪ ಸ್ವಾಗತಿಸಿದರು. ಅಧ್ಯಾಪಕರು ಗಳಾಗಿ ಸೇವೆ ಸಲ್ಲಿಸಿದ್ದ ನಾಯಡ ವಾಸು ನಂಜಪ್ಪ, ಅಮ್ಮಣಿಕುಟ್ಟಂಡ ಸುಬ್ಬಯ್ಯ, ಕೂತಂಡ ಅಮ್ಮಕ್ಕಿ ಸುಬ್ಬಯ್ಯ ಹಾಗೂ ತೀತೀರ ಸುಶೀಲ ಕುಶಾಲಪ್ಪ ಅವರುಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ನಾಚಪ್ಪ ವಹಿಸಿದ್ದರು. ಎಂ.ಪಿ. ಕಾವೇರಿ ಉಪಸ್ಥಿತರಿದ್ದರು.

ಅಪೂರ್ವ ತಂಡದಿಂದ ಪ್ರಾರ್ಥನೆ, ಎಂ.ಪಿ. ಕಾವೇರಿ, ಡಾ. ದೇಚಮ್ಮ ಎಂ.ಎಂ., ಪ್ರೊ. ಎಸ್.ಆರ್. ಉಷಲತಾ, ಕೆ.ಟಿ. ಸೀತಮ್ಮ ಹಾಗೂ ರೇವತಿ ಸಿ.ಎಂ. ಪರಿಚಯ ಮಾಡಿದರು. ಕೆ.ಜಿ. ವೀಣಾ ವಂದನಾರ್ಪಣೆ ಮಾಡಿದರು.