ಮಡಿಕೇರಿ, ಜ. 13: ಇಲ್ಲಿನ ನಿಶಾನಿಬೆಟ್ಟ ಮಾರ್ಗ ಬದಿ ಮಡಿಕೇರಿ ನಗರಸಭೆಯಿಂದ ವಿಲೇವಾರಿ ಮಾಡಲಾಗುತ್ತಿರುವ ರಾಶಿ ರಾಶಿ ಕಸದ ನಡುವೆ ಕಾಡ್ಗಿಚ್ಚು ಕಾಣಿಸಿಕೊಂಡು ಅಪಾಯ ಎದುರಾಗಿರುವ ಸಾಧ್ಯತೆಯಿದೆ ಎಂದು ನಗರ ಸಭಾ ಸದಸ್ಯ ಪೀಟರ್ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಟ್ಟ ಶ್ರೇಣಿಯಲ್ಲಿ ಹಾಕಲಾಗಿರುವ ಕಸದ ರಾಶಿಯಿಂದ ಬೆಂಕಿಯ ಕಿಡಿ ಗಾಳಿಯಲ್ಲಿ ಹರಡಿದರೆ ಪಕ್ಕದ ಕಾಡಿನಲ್ಲಿ ವ್ಯಾಪಿಸುವ ಸಾಧ್ಯತೆಯಿದ್ದು, ಕೂಡಲೇ ನಗರಸಭೆಯಿಂದ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಅಲ್ಲಿ ಕಸ ವಿಲೇವಾರಿ ಘಟಕ ನೋಡಿಕೊಳ್ಳುತ್ತಿರುವ ಏಕೈಕ ನೌಕರ ಹರೀಶ್, ಎರಡು ದಿನ ಹಿಂದೆ ಬೆಂಕಿಯ ತೀವ್ರತೆ ಹೆಚ್ಚಿದ್ದ ಸಂದರ್ಭ ಆಗ್ನಿ ಶಾಮಕ ಸಿಬ್ಬಂದಿ ಧಾವಿಸಿ ನಂದಿಸಿರುವದಾಗಿ ‘ಶಕ್ತಿ’ಗೆ ತಿಳಿಸಿದ್ದಾರೆ. ಗಾಳಿಯ ರಭಸಕ್ಕೆ ಬೆಂಕಿ ಹರಡುವ ಸಂಭವಿಸಿದ್ದು, ತನಗೆ ಎರಡು ತಿಂಗಳಿನಿಂದ ಸಂಬಳ ಕೂಡ ನೀಡಿಲ್ಲ ವೆಂದು ಅಳಲು ತೋಡಿಕೊಂಡಿದ್ದಾರೆ.
ಈಗಿನ ನಗರಸಭಾ ಆಯುಕ್ತರು ನೌಕರರ ಸಹಿತ ನಗರಸಭೆ ಅಧೀನ ಶಾಲೆಗಳ ಶಿಕ್ಷಕರಿಗೂ ಸರಿಯಾಗಿ ವೇತನ ನೀಡದೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂಷಿಸಿರುವ ಪೀಟರ್, ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಬಡಪಾಯಿ ನೌಕರರಿಗೆ ನ್ಯಾಯ ದೊರಕಿಸುವಂತೆ ಕಳಕಳಿ ವ್ಯಕ್ತಪಸಿಡಿದ್ದಾರೆ.