ಸಿದ್ದಾಪುರ, ಜ. 13: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಸಿದ್ದಾಪುರ, ಮಾಲ್ದಾರೆ, ಕರಡಿಗೋಡು, ಗುಹ್ಯ, ಇಂಜಲಗರೆ, ಅಮ್ಮತ್ತಿ, ಕಣ್ಣಂಗಾಲ, ಪಾಲಿಬೆಟ್ಟ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ನಿರಂತರವಾಗಿ ತೋಟಗಳಿಗೆ ನುಗ್ಗಿ ಬೆಳೆ ಸೇರಿದಂತೆ ಕೃಷಿ ಫಸಲುಗಳನ್ನು ನಾಶಮಾಡುತ್ತಿದೆ. ಅಲ್ಲದೇ ಕಾರ್ಮಿಕರ ಮೇಲೆ ಧಾಳಿ ನಡೆಸುತ್ತಿದೆ. ಕಾರ್ಮಿಕರು ಕೂಡ ಪ್ರಾಣಭೀತಿಯಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಭಾಗದಲ್ಲಿ 100 ಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟಿದ್ದು, ಬೆಳೆಗಾರರು, ರೈತರು, ಕಾರ್ಮಿಕರು ಸೇರಿದಂತೆ ಸಾರ್ವಜನಿಕರಿಗೂ, ಶಾಲಾ ಮಕ್ಕಳಿಗೂ ತೊಂದರೆಯುಂಟಾಗಿದೆ. ಈ ಉದ್ದೇಶದಿಂದ ತಾ. 16 ರಂದು ಪೂರ್ವಾಹ್ನ 11 ಗಂಟೆಗೆ ಸಿದ್ದಾಪುರ ಕಲ್ಚರಲ್ ಕ್ಲಬ್ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುತ್ತಿದ್ದು, ಸಭೆಗೆ ಆಗಮಿಸಿ, ಸೂಕ್ತ ಸಲಹೆ-ಸೂಚನೆಗಳನ್ನು ನೀಡಬೇಕೆಂದು ಮಂಡೇಪಂಡ ಪ್ರವೀಣ್ ಬೋಪಯ್ಯ ಹಾಗೂ ಬೆಳೆಗಾರರು ತಿಳಿಸಿದ್ದಾರೆ.