ಮಡಿಕೇರಿ, ಜ. 12: ಮಡಿಕೇರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಇಂದು ಬೆಳಗ್ಗಿನಿಂದಲೇ ರೈತರ ಕಲರವ ಕಂಡು ಬಂದಿತು. ಟೊಮೆಟೋ, ಈರುಳ್ಳಿ, ಬೀನ್ಸ್... 20, 30, 50 ಎಂಬಿತ್ಯಾದಿ ರೈತರ ಕೂಗಾಟ ಕೇಳಿಬಂದಿತು.

ಹೌದು ಜಿಲ್ಲೆಯ ರೈತರ ಅನುಕೂಲಕ್ಕಾಗಿ ಮಡಿಕೇರಿ ನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರೈತರ ಸಂತೆ ಆರಂಭವಾಗಿದ್ದು, ಇನ್ನು ಮುಂದೆ ಪ್ರತೀ ಶುಕ್ರವಾರ ನಾಡಿನ ರೈತರು ತಮ್ಮ ಹೊಲದಲ್ಲಿ ಬೆಳೆದ ತರಕಾರಿ, ಸೊಪ್ಪು ಹಾಗೂ ಇನ್ನಿತರ ದಿನಬಳಕೆಯ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಇಂದು ಬೆಳಗ್ಗಿನಿಂದಲೇ ಸಂತೆ ಆರಂಭಗೊಂಡಿದ್ದು, ಮಡಿಕೇರಿ ಸುತ್ತ ಮುತ್ತಲಿನ ಗ್ರಾಮೀಣ ಭಾಗಗಳಿಂದ ರೈತರು ಬೆಳೆದ ತರಕಾರಿ, ಸೊಪ್ಪು ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅದೇ ರೀತಿ ನಾಡು ಕೋಳಿಯ ಮಾರಾಟವು ಕಂಡು ಬಂದಿತು. ಗ್ರಾಹಕರು ಕೂಡ ರೈತರು ಬೆಳೆದ ತಾಜಾ ತರಕಾರಿಗಳನ್ನು ಅತೀ ಉತ್ಸಾಹದಿಂದ ಖರೀದಿಸುತ್ತಿದ್ದುದು ಗೋಚರಿಸಿತು.

ಮಧ್ಯಾಹ್ನಕ್ಕಾಗುವಷ್ಟರಲ್ಲಿಯೇ ರೈತರು ತಂದಿದ್ದ ತರಕಾರಿಗಳು ಮಾರಾಟವಾಗಿದ್ದು, ರೈತರಲ್ಲಿ ಹರ್ಷ ಕಂಡುಬಂದಿತು.

ರೈತ ಸಂತೆಯನ್ನು ಸದುಪಯೋಗಪಡಿಸಿಕೊಳ್ಳಿ: ಶಾಸಕ ಬೋಪಯ್ಯ

ರೈತರ ಸಂತೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಪ್ರಾಂಗಣದಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ ಉತ್ತಮ ವ್ಯವಸ್ಥೆಯನ್ನು ರೂಪಿಸಲಾಗಿದೆ. ಕೆಲವು ಕಡೆ ರೈತರು ಬೆಳೆದ ತರಕಾರಿಗಳನ್ನು ರಸ್ತೆ ಬದಿಯಲ್ಲೂ ಮಾರಾಟ ಮಾಡುವ ಸ್ಥಿತಿ ಇದೆ. ಇದರ ನಡುವೆ ಇಲ್ಲಿ ರೈತ ಸಂತೆ ಆರಂಭಿಸಿ, ರೈತರಿಗೆ ನೆರವು ನೀಡಲಾಗಿದ್ದು, ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ದಲ್ಲಾಳಿಗಳು ಕಡಿಮೆ ಬೆಲೆಗೆ ವಂಚಿಸಿ ಪಡೆದುಕೊಳ್ಳುವ ಸನ್ನಿವೇಶ ಇದೆ. ರೈತರು ಇಂತಹುದಕ್ಕೆ ಅವಕಾಶ ನೀಡದೇ ರೈತ ಸಂತೆಯ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ರೈತಸಂತೆ ಇನ್ನೂ ಹೆಚ್ಚಾಗಿ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.

ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ರೈತ ಸಂತೆಯಿಂದ ಕೊಡಗಿನ ರೈತಾಪಿ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಗ್ರಾಹಕರಿಗೆ ಈ ಸಂತೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕಾದ ಅಗತ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಸಂತೆಯಿಂದ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಲು ಸಾಧ್ಯ. ಇಲ್ಲಿ ಉತ್ತಮವಾಗಿ ತಾಜಾತನದಿಂದ ಕೂಡಿದ ತರಕಾರಿಗಳು ಲಭ್ಯವಿದೆ. ವಾರದಲ್ಲಿ ಶುಕ್ರವಾರ ಮಾತ್ರವಲ್ಲ ಎಲ್ಲಾ ದಿನವೂ ಸಂತೆ ನಡೆಯುವಂತಾಗಲಿ ಎಂದು ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕಾಂಗೀರ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ನಗರ ಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪ್ರಮುಖರಾದ ಸುವಿನ್ ಗಣಪತಿ, ಕೆ.ವಿ. ಯೋಗಾನಂದ, ಸಮಿತಿ ಸದಸ್ಯ ಬೆಪ್ಪುರನ ಮೇದಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.