ಸೋಮವಾರಪೇಟೆ, ಜ. 13: ಜಿಲ್ಲೆಯ ಈರ್ವರು ಶಾಸಕರ ನಿರ್ಲಕ್ಷ್ಯದಿಂದಾಗಿ ಕೊಡಗು ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ ಎಂದು ಮಾಜಿ ಸಚಿವ ಜೀವಿಜಯ ಆರೋಪಿಸಿದರು. ಇಲ್ಲಿನ ವೆಂಕಟೇಶ್ವರ ಬ್ಲಾಕ್‍ನ ಅಂಬೇಡ್ಕರ್ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಕಾಡುತ್ತಿದ್ದರೂ, ಇವುಗಳ ಪರಿಹಾರಕ್ಕೆ ಶಾಸಕರು ಮುಂದಾಗದೆ, ಜನರು ಪರಿತಪಿಸುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲೂ ಲಂಚದ ಹಾವಳಿ ಮಿತಿಮೀರಿದೆ ಎಂದು ದೂರಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ರೈತರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಪಕ್ಷದ ಮುಖಂಡ ಸತೀಶ್ ವಹಿಸಿದ್ದರು. ವೇದಿಕೆಯಲ್ಲಿ ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಪಕ್ಷದ ಪರಿಶಿಷ್ಟ ಜಾತಿ ಮತ್ತು ಪಂಗಡದ ರಾಜ್ಯ ಸಮಿತಿ ಉಪಾಧ್ಯಕ್ಷ ರಾಜಾರಾವ್, ಜಿಲ್ಲಾ ಉಪಾಧ್ಯಕ್ಷ ಕೆ.ಸಿ. ನಾಣಯ್ಯ, ವಕ್ತಾರ ಕಾಟ್ನಮನೆ ವಿಠಲ್ ಗೌಡ, ಪದಾಧಿಕಾರಿಗಳಾದ ಹೇಮಂತ್, ಎ.ಪಿ. ವೀರರಾಜು, ಡಿಸಿಲ್ವ, ಹೆಚ್.ಬಿ. ಜಯಮ್ಮ, ಸಂಜಯ್ ಜೀವಿಜಯ, ಆರ್‍ಎಂಸಿ ಸದಸ್ಯ ನಾಗರಾಜು, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ರಫೀಕ್ ಮತ್ತಿತರರು ಪಾಲ್ಗೊಂಡಿದ್ದರು.