ಮಡಿಕೇರಿ, ಜ. 12: ಕೊಡಗಿನ ವೀರ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಇಲ್ಲಿನ ನಿವಾಸ ‘ಸನ್ನಿಸೈಡ್’ನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವಸ್ತು ಸಂಗ್ರಹಾಲಯಕ್ಕೆ ಭಾರತ ಸೈನ್ಯದಲ್ಲಿ 1971ರಲ್ಲಿ ಕಾರ್ಯಾಚರಿಸಿರುವ ‘ಸೇನಾ ಟ್ಯಾಂಕ್’ ಸೇರ್ಪಡೆಗೊಂಡಿತು. ಮಹಾರಾಷ್ಟ್ರದ ಪೂನಾದ ಸೇನಾ ಶಿಬಿರ ಕಿರ್ಕೀನಲ್ಲಿದ್ದ ಈ ಯುದ್ಧ ಟ್ಯಾಂಕ್-255ನ್ನು 22 ಗಾಲಿಯ ಬೃಹತ್ ಲಾರಿಯಲ್ಲಿ ಮಡಿಕೇರಿ ಯಲ್ಲಿರುವ ತಿಮ್ಮಯ್ಯ ಅವರ ನಿವಾಸಕ್ಕೆ (ಹಿಂದಿನ ಸಾರಿಗೆ ಆಯುಕ್ತರ ಕಚೇರಿ) ತರಲಾಯಿತು.ಕಿರ್ಕೀ ಸೇನಾ ಕೇಂದ್ರದಲ್ಲಿದ್ದ ಈ ಯುದ್ಧ ಟ್ಯಾಂಕ್ 1971ರಲ್ಲಿ ಭಾರತ-ಪಾಕ್ ಯುದ್ಧದಲ್ಲಿ ಕಾರ್ಯ ನಿರ್ವಹಿಸಿದ್ದಾಗಿದ್ದು, ಅಂದಿನ ಯುದ್ಧ ಸಂದರ್ಭ ಲಾನ್ಸ್ ನಾಯಕ ಸುರೇಶ್, ಚಾಲಕ ಮುಖೇಶ್ ಸಹಿತ ಮದ್ದುಗುಂಡುಗಳನ್ನು ಸೋಹನ್ ಹಾಗೂ ಹೇಮಂತ್ ಎಂಬವರುಗಳ ತಂಡ ನಿರ್ವಹಿಸಿದ್ದಾಗಿದೆ.
1971ರ ಯುದ್ಧದಲ್ಲಿ 234ನೇ ರೆಜಿಮೆಂಟ್ನ ಹುಲಿ ಲಾಂಛನವಿರುವ ಈ ಟ್ಯಾಂಕ್ ಹಿಮ್ಮತ್ ಹೆಸರಿನಿಂದ ಅಂದು ಗುರುತಿಸಲ್ಪಟ್ಟು, ಮುಂದಿನ ದಿನಗಳಲ್ಲಿ ಇಲ್ಲಿನ ಜನರಲ್ ತಿಮ್ಮಯ್ಯ ಸ್ಮಾರಕ ವಸ್ತು ಸಂಗ್ರಹಾಗಾರದಲ್ಲಿ ಕಾಣುವಂತಾಗಿದೆ. ಕಳೆದ ಮಂಗಳವಾರ ಪೂನಾದ ಕರ್ಕೀ ಸೇನಾ ಶಿಬಿರದಿಂದ ಈ ಟ್ಯಾಂಕ್ ಹೊತ್ತ ವಾಹನ ಹೊರಟ್ಟಿದ್ದು, ಬೆಂಗಳೂರು ಮಾರ್ಗವಾಗಿ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಡಿಕೇರಿ ತಲಪಿತು.
ಅಲ್ಲಿನ ನಿವಾಸಿ ಸಂಜಯಕುಮಾರ್ ಹಾಗೂ ವಾಹನದ ಚಾಲಕ ಸತೀಶ್ ಚೌಹಾಣ್ ಈ ಯುದ್ಧ ಟ್ಯಾಂಕ್ ಅನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ನಿವಾಸ ತಲಪಿಸುವ ಹೊಣೆ ಹೊತ್ತಿದ್ದರು.
ಮಡಿಕೇರಿಗೆ ಅದು ಬರುತ್ತಿದ್ದಂತೆಯೇ
(ಮೊದಲ ಪುಟದಿಂದ) ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಪ್ರಮುಖರಾದ ಮೇಜರ್ ಬಿ.ಎ. ನಂಜಪ್ಪ (ನಿವೃತ್ತ) ಹಾಗೂ ಇತರರು ಬರಮಾಡಿಕೊಂಡರು. ಆ ಬಳಿಕ ಲೆ.ಜ. ಬಿ.ಸಿ. ನಂದಾ (ನಿವೃತ್ತ) ಅವರು ನಂಜಪ್ಪ ಜತೆಗೂಡಿ ಬಂದು ಖುದ್ದು ಈ ಐತಿಹಾಸಿಕ ಯುದ್ಧ ಟ್ಯಾಂಕ್ ವೀಕ್ಷಿಸಿ ಮಡಿಕೇರಿಗೆ ಅದನ್ನು ತಲಪಿಸಿದ ಚಾಲಕನಿಗೆ ಶಹಭಾಸ್ಗಿರಿ ನೀಡಿದರು.
ಸಮಾಲೋಚನೆ
ವೀರ ಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನ ಕಾಮಗಾರಿ ಪ್ರಗತಿ ಮತ್ತು ಅಭಿವೃದ್ಧಿ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.
ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಲೆ. ಜನರಲ್ ಬಿ.ಸಿ. ನಂದ, ಕರ್ನಲ್ ಸುಬ್ಬಯ್ಯ, ಮೇಜರ್ ನಂಜಪ್ಪ, ಉಳ್ಳಿಯಡ ಎಂ.ಪೂವಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ರಾಜಮಾದಪ್ಪ, ನವೀನ್ ಬೆಳ್ಯಪ್ಪ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಪೌರಾಯುಕ್ತೆ ಬಿ. ಶುಭಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಣಜೂರು ಮಂಜುನಾಥ್ ಇತರರು ಇದ್ದರು.
ಜನರಲ್ ತಿಮ್ಮಯ್ಯ ಸ್ಮಾರಕ ಭವನ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಮುಂದುವರೆದ ಕಾಮಗಾರಿಗೆ 2.30 ಕೋಟಿ ರೂ. ಅನುದಾನ ನೀಡಿದ್ದು, ಈ ಸಂಬಂಧ ಸ್ಮಾರಕ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ ಸುಭಾಷ್ ಅವರು ಪವರ್ ಪಾಯಿಂಟ್ ಮೂಲಕ ಹಲವು ಮಾಹಿತಿ ನೀಡಿದರು.