ಸೋಮವಾರಪೇಟೆ,ಜ.13: ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ, ಜೆಡಿಎಸ್‍ನಲ್ಲಿ ಪ್ರಮುಖ ಹುದ್ದೆಗಳನ್ನಲಂಕರಿಸಿದ್ದ ಎಸ್.ಬಿ.ಭರತ್ ಕುಮಾರ್, ಎನ್.ಆರ್.ಅಜೀಶ್ ಕುಮಾರ್, ಎಚ್.ಎಸ್.ಯೋಗೇಶ್ ಕುಮಾರ್, ಎಚ್.ಸಿ.ರಾಮಕೃಷ್ಣ, ಕೆ.ಪಿ.ಆದರ್ಶ್ ಅವರುಗಳು ಬಿಜೆಪಿಗೆ ಸೇರ್ಪಡೆಗೊಳ್ಳುವದಾಗಿ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ.ಎಂ.ವಿಜಯ, ಬೆಂಬಲಿಗರೊಂದಿಗೆ ತಾ.15ರಂದು ಜೇಸಿ ವೇದಿಕೆಯಲ್ಲಿ ನಡೆಯುವ ಜಿಲ್ಲಾ ಬಿಜೆಪಿ ಯುವಮೋರ್ಚಾದ ಸಮಾವೇಶದಲ್ಲಿ ಪಕ್ಷದ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದೇವೆ ಎಂದರು.
ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಎಂಎಲ್‍ಸಿ ಸುನಿಲ್ ಸುಬ್ರಮಣಿ ಅವರುಗಳ ಆಹ್ವಾನವನ್ನು ಸ್ವೀಕರಿಸಿ ಬಿಜೆಪಿ ಸೇರುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸುಭದ್ರವಾಗಿದ್ದು, ಅವರ ಕೈಬಲಪಡಿಸಲು ಪಕ್ಷಕ್ಕಾಗಿ ದುಡಿಯಲಿದ್ದೇವೆ ಎಂದು ಹೇಳಿದರು.
ನಮ್ಮ ನಡೆ ಮೋದಿ ಕಡೆಗೆ ಎಂದು ಹೇಳಿದ ಭರತ್ ಕುಮಾರ್, ಹಿಂದೆ ಬಿಜೆಪಿಯಲ್ಲೇ ಕಾರ್ಯನಿರ್ವಹಿಸಿದ್ದು, ಈಗ ಮರಳಿ ನನ್ನ ಮಾತೃ ಪಕ್ಷಕ್ಕೆ ತೆರಳುತ್ತಿದ್ದೇನೆ. ನಮಗೆಲ್ಲರಿಗೂ ಸ್ಥಾನಮಾನ ನೀಡುವ ಭರವಸೆಯೂ ಸಿಕ್ಕಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಬಾವುಟ ಹಾರಿಸುವದೇ ನಮ್ಮ ಗುರಿ ಎಂದು ಹೇಳಿದರು. ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ಪರವಾಗಿ ಕೆಲಸ ನಿರ್ವಹಿಸಲಾಗುವದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾ. 15ರಂದು ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಭಾಗದಿಂದ 1000ಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರೊಂದಿಗೆ ಬಿಜೆಪಿ ಸೇರುತ್ತಿದ್ದೇವೆ ಎಂದು ಭರತ್‍ಕುಮಾರ್ ತಿಳಿಸಿದರು. ಪ್ರಧಾನಿ ಮೋದಿಯವರ ಭ್ರಷ್ಟಾಚಾರ ರಹಿತ ಆಡಳಿತ, ಶಾಸಕ ಅಪ್ಪಚ್ಚು ರಂಜನ್ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಇಷ್ಟಪಟ್ಟು ಪಕ್ಷ ಸೇರಿದ್ದೇನೆ ಎಂದು ಅಜೀಶ್ ಕುಮಾರ್ ಅಭಿಪ್ರಾಯಿಸಿದರು.
ಗುರುವಾರ ಮಹಿಳಾ ಸಮಾಜದಲ್ಲಿ ಹಿರಿಯ ಬಿಜೆಪಿ ಪ್ರಮುಖರು ನಡೆಸಿದ ಸಭೆಯಲ್ಲಿ, ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ವಿ.ಎಂ. ವಿಜಯ, ಭರತ್, ಒಂದಷ್ಟು ಮಂದಿ ವಿರೋಧ ಮಾಡಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ಅದನ್ನೆಲ್ಲಾ ಪಕ್ಷದ ನಾಯಕರು ಸರಿಪಡಿಸಲಿದ್ದಾರೆ ಎಂದು ಹೇಳಿದರು.