ಕುಶಾಲನಗರ ಜ. 12: ತಾ. 25 ರಂದು ಮಡಿಕೇರಿಯಲ್ಲಿ ಜಾತ್ಯತೀತ ಜನತಾದಳದ ಜಿಲ್ಲಾ ಮಟ್ಟದ ಯುವ ಸಮಾವೇಶ ನಡೆಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಸಮಾವೇಶದ ಹಿನ್ನೆಲೆ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಭೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಮತ್ತಿತರ ಮುಖಂಡರು ಆಗಮಿಸ ಲಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಯುವ ಜನತಾದಳದ ಅಧ್ಯಕ್ಷ ಸಿ.ಎಲ್. ವಿಶ್ವ ಅಧ್ಯಕ್ಷತೆಯಲ್ಲಿ ವಿವಿಧ ಘಟಕಗಳನ್ನು ರಚಿಸಲಾಗಿದೆ.

ಯುವಶಕ್ತಿ ಮತ್ತು ಸ್ತ್ರೀ ಶಕ್ತಿಯನ್ನು ಬಳಸುವ ಮೂಲಕ ಪಕ್ಷದ ಬಲವರ್ಧನೆಗೆ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದರು. ಸಮಾವೇಶದಲ್ಲಿ ಬೂತ್ ಮಟ್ಟದ ಯುವ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಮಡಿಕೇರಿ ಕ್ಷೇತ್ರದ ವಿಧಾನಸಭಾ ಅಭ್ಯರ್ಥಿ ಬಿ.ಎ. ಜೀವಿಜಯ ಮಾತನಾಡಿ, ರಾಜ್ಯದಲ್ಲಿ ಯುವಕರು ಸರಕಾರದ ಬದಲಾವಣೆಗೆ ಆಶಯ ವ್ಯಕ್ತಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಪಕ್ಷ ಬಲವರ್ಧನೆಗೆ ಕಾರ್ಯೋನ್ಮುಖ ರಾಗಬೇಕಿದೆ ಎಂದರು.

ಪ್ರಸಕ್ತ ರಾಜ್ಯದ ರಾಜಕೀಯ ಚಿತ್ರಣ ದಾರಿ ತಪ್ಪಿದ್ದು ರಾಜ್ಯದ ಬೊಕ್ಕಸಕ್ಕೆ ಆದಾಯದ ಕೊರತೆ ಕೂಡ ಎದುರಾಗುತ್ತಿದೆ ಎಂದರು.

ಈ ಸಂದರ್ಭ ಜೆಡಿಎಸ್ ರಾಜ್ಯ ಸಮಿತಿಯ ಉಪಾಧ್ಯಕ್ಷ ಎಂ.ಎಂ. ಶರೀಫ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್, ರಾಜ್ಯ ಪ್ರತಿನಿಧಿ ಮನ್ಸೂರ್, ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಸಿ.ಎಲ್. ವಿಶ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಾಜೇಶ್, ಪಟ್ಟಣ ಪಂಚಾಯಿತಿ ಸದಸ್ಯ ಹೆಚ್.ಡಿ. ಚಂದ್ರು ಮತ್ತಿತರರು ಇದ್ದರು.