ಕುಶಾಲನಗರ, ಜ 12: ಕುಶಾಲನಗರ-ಮಡಿಕೇರಿ ರಸ್ತೆಯ ಬದಿಯಲ್ಲಿರುವ ತಾವರೆಕೆರೆಗೆ ಸುಂದರ ಕಾಯಕಲ್ಪ ನೀಡಲು ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದೆ. ಅಂದಾಜು 1 ಕೋಟಿ ರೂಗಳ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿಗೊಳಿಸಿ ಪ್ರವಾಸಿ ಕೇಂದ್ರವನ್ನಾಗಿಸುವ ಯೋಜನೆಗೆ ಕ್ರಿಯಾಯೋಜನೆ ಸಿದ್ದಪಡಿಸಲಾಗಿದೆ.ಕೆರೆಯ ಅಭಿವೃದ್ಧಿಗೆ ಕುಡಾ ಮೂಲಕ ರೂ. 50 ಲಕ್ಷ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ರೂ. 50 ಲಕ್ಷ ಅನುದಾನದೊಂದಿಗೆ ಸುಂದರವಾದ ಪ್ರವಾಸಿ ಕೇಂದ್ರ ನಿರ್ಮಾಣಕ್ಕೆ ನೀಲಿನಕ್ಷೆ ರಚಿಸಲಾಗಿದೆ ಎಂದು ಕುಡಾ ಅಧ್ಯಕ್ಷ ಬಿ.ಜಿ.ಮಂಜುನಾಥ್ ಗುಂಡುರಾವ್ ಮಾಹಿತಿ ನೀಡಿದ್ದಾರೆ. ಕೆರೆಯಲ್ಲಿ ಮನರಂಜನಾ (ಮೊದಲ ಪುಟದಿಂದ) ಚಟುವಟಿಕೆಗಳು ಸೇರಿದಂತೆ ಪ್ರವಾಸಿಗರಿಗೆ ಮುದ ನೀಡುವ ಕಾರ್ಯಕ್ರಮಗಳನ್ನು ರೂಪಿಸಲಾಗುವದು. ಸ್ಥಳೀಯರ ನೆರವಿನೊಂದಿಗೆ ಕೆರೆಯ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಗುಂಡುರಾಯರ ಪ್ರತಿಮೆಯೊಂದನ್ನು ನಿರ್ಮಿಸಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಒತ್ತಿನಲ್ಲಿ ಇರುವ ತಾವರೆಕೆರೆಯ ಬಹುತೇಕ ಪ್ರದೇಶಗಳು ಒತ್ತುವರಿಯಾಗುವದರೊಂದಿಗೆ ಕೆರೆಯಲ್ಲಿ ಸಂಪೂರ್ಣ ಗಿಡಗಂಟಿಗಳು ಬೆಳೆದು ನಿಂತಿರುವ ದೃಶ್ಯ ಕಾಣಬಹುದು.ಇದರೊಂದಿಗೆ ನೆರೆಯ ಬೃಹತ್ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಹಾಗೂ ಕಲುಷಿತ ನೀರು ನೇರವಾಗಿ ಕೆರೆಗೆ ಸೇರುವದರೊಂದಿಗೆ ನೀರು ವಾಸನಾಯುಕ್ತವಾಗಿ ಇದ್ದು ಪರಿಸರಕ್ಕೆ ಧಕ್ಕೆ ಉಂಟಾಗುವ ಪರಿಸ್ಥಿತಿ ಸೃಷ್ಠಿಯಾಗಿದೆ. ಕಳೆದ 10 ವರ್ಷಗಳ ಹಿಂದೆ ರೂ. 50 ಲಕ್ಷ ವೆಚ್ಚ ಮಾಡಿ ಕೆರೆಯ ಹೂಳನ್ನು ತೆರವುಗೊಳಿಸಿದ್ದು ಈ ಕಾಮಗಾರಿ ಕೂಡ ಅಪೂರ್ಣಗೊಂಡಿರುವ ಬಗ್ಗೆ ದೂರುಗಳು ಕೇಳಿಬಂದಿತ್ತು.

ವಿಶಾಲ ಪ್ರದೇಶದಲ್ಲಿರುವ ತಾವರೆಕೆರೆ ಪ್ರಸಕ್ತ ನಗರದ ಕಲುಷಿತ ನೀರು ಸೇರುವ ಕೇಂದ್ರವಾಗಿ ಪರಿವರ್ತನೆಗೊಳ್ಳುವದರೊಂದಿಗೆ ಅಪರೂಪದ ಕೆರೆಯೊಂದು ಅವನತಿಯತ್ತ ಸಾಗುತ್ತಿರುವ ಬಗ್ಗೆ ಇತ್ತೀಚೆಗೆ ಶಕ್ತಿಯಲ್ಲಿ ವಿಶೇಷ ವರದಿ ಪ್ರಕಟಗೊಂಡಿರುವದನ್ನು ಇಲ್ಲಿ ಸ್ಮರಿಸಬಹುದು.ಆದಷ್ಟು ಬೇಗನೆ ಪಟ್ಟಣದ ಅವನತಿಯತ್ತ ಸಾಗುತ್ತಿರುವ ಕೆರೆಯೊಂದು ಅಭಿವೃದ್ಧಿಗೊಳ್ಳುವದರೊಂದಿಗೆ ನೂತನ ಕಾಯಕಲ್ಪ ದೊರೆಯಲಿ ಎನ್ನುವದು ಈ ಭಾಗದ ನಾಗರೀಕರ ಆಶಯವಾಗಿದೆ. -ವರದಿ: ಚಂದ್ರಮೋಹನ್