ಮಡಿಕೇರಿ, ಜ. 12: ತಲಕಾವೇರಿ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಬೇಕೆಂದು ಒತ್ತಾಯಿಸಿ ಚೇರಂಬಾಣೆ ಬೇಂಗ್‍ನಾಡ್ ಕೊಡವ ಸಮಾಜ ಮತ್ತು ರಿಕ್ರಿಯೇಷನ್ ಕ್ಲಬ್, ನೆಲಜಿ, ಅಂಬಲ ಮಹಿಳಾ ಸಮಾಜ ಹಾಗೂ ನಾಪೋಕ್ಲು ಮಹಿಳಾ ಸಮಾಜ ವತಿಯಿಂದ ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ಪ್ರಮುಖರು, ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ನಡೆಯುತ್ತಿರುವ ಅಪವಿತ್ರ ತಡೆಗಟ್ಟಲು ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನೆ ಮೂಲಕ ಪರಿಹಾರ ನಡೆಸಿ ಪಾವಿತ್ರ್ಯತೆ ಕಾಪಾಡಬೇಕು. ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರಧಾನ ಮಾಡಿ, ಭಗಂಡೇಶ್ವರ ಸನ್ನಿಧಿ ಮತ್ತು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಭಕ್ತಿಯಿಂದ ಹೋಗುವವರಿಗೆ ಟೋಕನ್ ನೀಡಿ, ಡ್ರೆಸ್‍ಕೋಡ್ ನೀಡಿ ಅವಕಾಶ ಮಾಡಿಕೊಡಬೇಕು. ಇದರೊಂದಿಗೆ ತಲಕಾವೇರಿಯಲ್ಲಿ ಕೆಲವು ಅನಧಿಕೃತ ಅಂಗಡಿ ಮತ್ತು ಹೋಟೆಲುಗಳಿಂದ ಪರಿಸರ ಹಾಳಾಗುತ್ತಿದ್ದು, ಕೂಡಲೇ ಜಿಲ್ಲಾಡಳಿತ ಇವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಟ್ಟದ ಪಾವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಪ್ರಮುಖರು, ವಾರದೊಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಕೊಡವ ಸಮಾಜ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.

ಮೇಲ್ಸೇತುವೆ ಬೇಡ : ಭಾಗಮಂಡಲದಲ್ಲಿ ಯಾವದೇ ಕಾರಣಕ್ಕೂ ಮೇಲ್ಸೇತುವೆ ನಿರ್ಮಿಸಬಾರದು ಎಂದು ಒತ್ತಾಯಿಸಿದ ಪ್ರಮುಖರು, ನಿರ್ಮಿಸುವದಾದರೆ ಅದರ ಎತ್ತರ 2-3 ಅಡಿಗೆ ಮಾತ್ರ ಸೀಮಿತವಾಗಿರಬೇಕು. ದೇವಸ್ಥಾನಕ್ಕಿಂತ ಎತ್ತರದಲ್ಲಿ ಮೇಲ್ಸೇತುವೆ ನಿರ್ಮಾಣವಾದಲ್ಲಿ ಅದು ಭಗಂಡೇಶ್ವರನಿಗೆ ಮಾಡಿದ ಅವಮಾನವಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಅಡುಗೆ ನಿಷೇಧ : ತ್ರಿವೇಣಿ ಸಂಗಮದಲ್ಲಿ ಪ್ರವಾಸಿಗರು ಅಡುಗೆ ಮಾಡುವದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಹಾಗೂ ಪ್ರವಾಸಿಗರಿಗೆ ಅಡುಗೆ ಮಾಡಲು ಬೇರೆ ವ್ಯವಸ್ಥೆಯನ್ನು ಅನತಿ ದೂರದಲ್ಲಿ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಪುಣ್ಯಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಈಗಾಗಲೇ ಕೆಲವೊಂದು ವ್ಯವಸ್ಥೆ ಮಾಡಲಾಗಿದೆ. ಬೇಡಿಕೆಗಳ ಬಗ್ಗೆ ಗಮನ ಹರಿಸಲಾಗುವದು ಎಂದು ತಿಳಿಸಿದರು.

ನೆಲಜಿ, ಅಂಬಲ ಮಹಿಳಾ ಸಮಾಜದ ಅಧ್ಯಕ್ಷೆ ಮಣವಟ್ಟೀರ ಕಮಲ ಬೆಳ್ಯಪ್ಪ, ಕಾರ್ಯದರ್ಶಿ ಡೈಸಿ ಸೋಮಣ್ಣ, ನಾಪೋಕ್ಲು ಮಹಿಳಾ ಸಮಾಜದ ಪ್ರಮುಖರು, ಚೇರಂಬಾಣೆ ಬೇಂಗ್‍ನಾಡ್ ಕೊಡವ ಸಮಾಜದ ಪ್ರಮುಖರು, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ ಇತರರು ಪಾಲ್ಗೊಂಡಿದ್ದರು.