ಮಡಿಕೇರಿ, ಜ.13 : ಇತ್ತೀಚೆಗೆ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಕುಂಬೂರಿನಲ್ಲಿ ಸಭೆ ನಡೆಸಿದ ಬಿಜೆಪಿ ಪ್ರಮುಖರು ಸ್ಥಳೀಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿಯಮ ಬಾಹಿರವಾಗಿ ವಿದ್ಯಾರ್ಥಿಗಳ ಬಿಸಿಯೂಟದ ಪಾತ್ರೆಗಳನ್ನು ಬಳಸಿ ಬಾಡೂಟವನ್ನು ತಯಾರಿಸಿದ್ದಾರೆ ಎಂದು ಆರೋಪಿಸಿರುವ ಮಾದಾಪುರ ಗ್ರಾ.ಪಂ ಸದಸ್ಯ ಹೆಚ್.ಎಂ.ಸೋಮಪ್ಪ, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿರುವದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. 10 ರಂದು ಸಂಜೆ 7 ಗಂಟೆ ಸುಮಾರಿನಲ್ಲಿ ಶಾಲೆಯ ಆವರಣವನ್ನು ಪ್ರವೇಶಿಸಿ ಬಿಸಿಯೂಟದ ಪಾತ್ರೆಗಳನ್ನು ಬಳಸಿ ಬಾಡೂಟ ತಯಾರಿಸಿದ್ದಾರೆ. ಈ ಪ್ರಕರಣಕ್ಕೆ ಮುಖ್ಯ ಶಿಕ್ಷಕರು ಹಾಗೂ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರು ನೇರ ಹೊಣೆ ಎಂದು ಆರೋಪಿಸಿದರು. ಶಾಲೆಯನ್ನು ರಾಜಕೀಯ ಪಕ್ಷಗಳ ಸಭೆಗಾಗಿ ಬಳಸಿಕೊಂಡಿರುವದು ಖಂಡನೀಯವೆಂದರು.
ಶಾಲೆಯನ್ನು ರಾಜಕೀಯ ಸಭೆÉಗೆ ಕಾನೂನು ಬಾಹಿರವಾಗಿ ಬಳಸಿ ಕೊಂಡ ಪ್ರಕರಣದಲ್ಲಿ ಸೋಮವಾರಪೇಟೆ ತಾ.ಪಂ ಪ್ರತಿನಿಧಿಯೊಬ್ಬರ ಪಾತ್ರವೂ ಇದೆ. ರಾತ್ರಿಯ ಅವಧಿಯಲ್ಲಿ ರಾಜಕೀಯ ಸಭೆ ನಡೆಯುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖಾ ಅಧಿಕಾರಿಗಳಿಗೆ ತಕ್ಷಣ ಮಾಹಿತಿಯನ್ನು ನೀಡಿದ್ದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬರಲಿಲ್ಲವೆಂದು ಸೋಮಪ್ಪ ಆರೋಪಿಸಿದರು.
ಸೋಮವಾರಪೆÉೀಟೆ ತಾ.ಪಂ ಉಪಾಧ್ಯಕ್ಷರು ಗ್ರಾ.ಪಂ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ನಿಯಮ ಉಲ್ಲಂಘಿಸಿ ವಸತಿ ಯೋಜನೆಯಡಿ ಮನೆ ಉಳ್ಳವರಿಗೆ ಮನೆಯನ್ನು ಮಂಜೂರು ಮಾಡಿಕೊಡಲಾಗಿದೆ ಎಂದು ಆರೋಪಿಸಿದರು. ಅರ್ಹ ಫಲಾನುಭವಿಗಳಿಗೆ ವಸತಿ ಹಂಚಿಕೆ ಮಾಡದೆ ಬಿಜೆಪಿ ಕಾರ್ಯಕರ್ತರನ್ನೆ ಹುಡುಕಿ ಹಂಚಿಕೆ ಮಾಡಲಾಗಿದೆ. ಕಾನೂನಿಗೆ ವಿರುದ್ಧವಾಗಿ ಉಪಾಧ್ಯಕ್ಷರ ಮನೆಯಲ್ಲೆ ಕಾರ್ಯ ಯೋಜನೆ ಪತ್ರವನ್ನು ನೀಡಲಾಗಿದೆ. ತಾ.ಪಂ ಉಪಾಧ್ಯಕ್ಷರು ರಾಜಕೀಯ ದುರುದ್ದೇಶವನ್ನು ಗ್ರಾ.ಪಂ ಆಡಳಿತ ವ್ಯವಸ್ಥೆಯಲ್ಲಿ ಪ್ರದರ್ಶಿಸುತ್ತಿದ್ದು, ಸೋಮವಾರಪೇಟೆ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಹಾಗೂ ನೋಡಲ್ ಅಧಿಕಾರಿಗಳು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಸೋಮಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯ ಎನ್.ಎನ್. ಪ್ರಸನ್ನ ಕುಮಾರ್ ಹಾಗೂ ಗ್ರಾಮಸ್ಥ ವಿ.ಪಿ. ವಿಕ್ರಂ ಉಪಸ್ಥಿತರಿದ್ದರು.