ಮಡಿಕೇರಿ, ಜ. 12: ರಾಷ್ಟ್ರೀಯ ಸ್ವಯಂಸೇವಕ, ಭಜರಂಗದಳ ಹಾಗೂ ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳ ಪ್ರತಿಕೃತಿಯನ್ನು ದಹಿಸಲಾಯಿತು.

ಮಡಿಕೇರಿ ನಗರದ ಜ. ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ತಕ್ಕ ಉತ್ತರ : ಶಾಸಕದ್ವಯರ ಹೇಳಿಕೆ

ಪ್ರತಿಯೊಬ್ಬರಲ್ಲೂ ರಾಷ್ಟ್ರಭಕ್ತಿಯನ್ನು ಮೂಡಿಸುತ್ತಿರುವ ಆರ್.ಎಸ್.ಎಸ್. ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಬಿಂಬಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಖಂಡನೀಯ. ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರ್.ಎಸ್.ಎಸ್.ನಿಂದ ಬೆಳೆದು ಬಂದವರಾಗಿದ್ದಾರೆ. ಇವತ್ತು ವಿಶ್ವದ 3ನೇ ಪ್ರಮುಖ ವ್ಯಕ್ತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಂಬಿತರಾಗಿದ್ದಾರೆ. ಅಂತಹವರು ಬೆಳೆದು ಬಂದ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಜರೆದಿರುವದು ಖಂಡನೀಯ. ವಿನಾಶಕಾಲೆ ವಿಪರೀತ ಬುದ್ಧಿ ಎಂಬಂತೆ ಮುಖ್ಯಮಂತ್ರಿಗಳು ಹಾಗೂ ದಿನೇಶ್ ಗುಂಡೂರಾವ್ ದಾರಿ ಹೋಕರಂತೆ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ. ಧಿಮಾಕಿನ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೌಜನ್ಯಕ್ಕಾದರೂ ಮರು ಹೇಳಿಕೆ ನೀಡಬಹುದಿತ್ತು. ನಮಗೆ ಸಂಘಟನೆ ಸಂಸ್ಕಾರ, ಸಂಸ್ಕøತಿ ಕಲಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ದೇಶಭಕ್ತ ಸಂಘಟನೆಗಳನ್ನು ದೇಶದ್ರೋಹಿ, ಉಗ್ರಗಾಮಿ ಸಂಘಟನೆಗಳು ಅಂತ ಕರೆದಿರುವದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೋಗ್ಯತೆಗೆ ತಕ್ಕುದಾದುದಲ್ಲ. ರಾಜ್ಯದಲ್ಲಿ 19ಕ್ಕೂ ಅಧಿಕ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗಿದೆ. 33 ಮಂದಿ ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ. ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಾಂತೆಯಂಡ ರವಿ ಕುಶಾಲಪ್ಪ, ರಾಬಿನ್ ದೇವಯ್ಯ, ನಾಪಂಡ ರವಿ ಕಾಳಪ್ಪ, ಬಾಲಚಂದ್ರ ಕಳಗಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಜಿ.ಪಂ. ಸದಸ್ಯರಾದ ಸಿ.ಕೆ. ಬೋಪಣ್ಣ, ಮುರುಳಿ ಕರುಂಬಮ್ಮಯ್ಯ, ನೆಲ್ಲಚಂಡ ಕಿರಣ್, ಶಶಿ ಸುಬ್ರಮಣಿ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ. ಜಗದೀಶ್, ಉಮೇಶ್ ಸುಬ್ರಮಣಿ, ಪ್ರಮುಖರಾದ ಸುವಿನ್ ಗಣಪತಿ, ಉಷಾ ದೇವಮ್ಮ, ಅನಿತಾ ಪೂವಯ್ಯ, ಯಮುನಾ ಚಂಗಪ್ಪ, ಮನು ಮಹೇಶ್, ಧನಂಜಯ, ಹಿಂದೂ ಸಂಘಟನೆಗಳ ಪ್ರಮುಖರಾದ ಚೇತನ್, ಅಜಿತ್ ಮತ್ತಿತರರಿದ್ದರು.