ಪೊನ್ನಂಪೇಟೆ, ಜ. 13: ಗ್ರಾಮೀಣ ರಸ್ತೆ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‍ನಡಿ ಜಿಲ್ಲೆಗೆ ಮಂಜೂರಾದ ರೂ. 50 ಕೋಟಿ ಹಣದಲ್ಲಿ ವೀರಾಜಪೇಟೆ ತಾಲೂಕಿನ ಪೊನ್ನಪ್ಪಸಂತೆ ಗ್ರಾ.ಪಂ.ಗೆ ರೂ. 33,87,161 ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನುಳಿದ ಕೆಲವು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಬಾಳೆಲೆ ಜಿ.ಪಂ. ಕ್ಷೇತ್ರದ ಸದಸ್ಯ ಬಿ.ಎನ್. ಪ್ರಥ್ಯು ತಿಳಿಸಿದ್ದಾರೆ.

ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‍ನಿಂದ ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳು ಸುಧಾರಣೆಯಾಗಿದೆ. ದಶಕಗಳಿಂದ ದುಸ್ಥಿತಿಯಲ್ಲಿದ್ದ ರಸ್ತೆಗಳಿಗೂ ಇದೀಗ ಮುಕ್ತಿ ದೊರಕಿದೆ.

ಸರಕಾರದ ಅನುದಾನದಲ್ಲಿ ನಡೆಯುವ ಯಾವದೇ ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸಾರ್ವಜನಿಕರಿಗಿದೆ. ಪೊನ್ನಪ್ಪಸಂತೆ ಗ್ರಾ.ಪಂ. ವ್ಯಾಪ್ತಿಯ ಮತ್ತೆ 5 ರಸ್ತೆಗಳ ಅಭಿವೃದ್ಧಿಗಾಗಿ ಇದೀಗ ಬೇಡಿಕೆ ಬಂದಿದೆ. ಇದನ್ನು ಮುಂದಿನ ಕ್ರಿಯಾಯೋಜನೆಯಲ್ಲಿ ಸೇರಿಸಲು ಮೊದಲ ಆದ್ಯತೆ ನೀಡಲಾಗುವದು ಎಂದು ಭರವಸೆ ನೀಡಿದರು.

ಪೊನ್ನಪ್ಪಸಂತೆ ಗ್ರಾ.ಪಂ. ವ್ಯಾಪ್ತಿಯ ಬೆಸಗೂರು ಗ್ರಾಮದ ಪುಳ್ಳಂಗಂಡ ಐನ್‍ಮನೆಗೆ ಹೋಗುವ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ಕಿರುಗೂರು-ಬೆಸಗೂರು ಚೊಟ್ಟೆಕಾಳಪಂಡ ಗುಮ್ಮತ್‍ಮಂದ್ ಲಿಂಕ್ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ಬಿಳೂರು-ಎಡಮುಂಡೆ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ನಲ್ಲೂರು-ಬೆಸಗೂರು ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ಪೊನ್ನಪ್ಪಸಂತೆ ದೇವಸ್ಥಾನ - ಆದೇಂಗಡ ಕುಟುಂಬಸ್ಥರ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ಬೆಸಗೂರು ಸರಕಾರಿ ಪ್ರೌಢಶಾಲೆ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ ಮತ್ತು ಅರಮಣಮಾಡ-ಪಾರುವಂಗಡ ಕುಟುಂಬಸ್ಥರ ರಸ್ತೆ ಅಭಿವೃದ್ಧಿಗೆ ರೂ. 4 ಲಕ್ಷ ಬಿಡುಗಡೆಯಾಗಿದೆ ಎಂದು ಹೇಳಿದರು.

ಈ ಸಂದರ್ಭ ಪೊನ್ನಪ್ಪಸಂತೆ ವಲಯ ಕಾಂಗ್ರೆಸ್ ಅಧ್ಯಕ್ಷ ಆದೇಂಗಡ ನಳ ಕರುಂಬಯ್ಯ, ಪೊನ್ನಪ್ಪಸಂತೆ ಗ್ರಾ.ಪಂ. ಸದಸ್ಯ ಚೆಟ್ಟಿಮಾಡ ಬೋಪಣ್ಣ, ಕಾಂಗ್ರೆಸ್ ಪ್ರಮುಖರಾದ ಬೋಡಂಗಡ ಅಶೋಕ್, ಕೆ.ಡಿ. ರಮೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.