ಮಡಿಕೇರಿ, ಜ. 12: ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವ ವಿಶೇಷ ಚೇತನ ಮಕ್ಕಳ ಮೇಲೆ ಪ್ರೀತಿ-ವಿಶ್ವಾಸ ತೋರಿ ಅವರನ್ನೂ ಕೂಡ ಮುಖ್ಯವಾಹಿನಿಗೆ ತರಬೇಕೆಂದು ಗಣ್ಯರು ಕರೆ ನೀಡಿದ್ದಾರೆ.
ಸುವರ್ಣ ಕಾಫಿ ಮಕ್ಕಂದೂರು ಮತ್ತು ಕುಶಾಲನಗರ ಇದರ ಪ್ರಾಯೋಜಕತ್ವದಲ್ಲಿ ‘ಸಾಧ್ಯ’ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್ ಮೆಂಟ್‍ನ ಉದ್ಘಾಟನೆ ಹಾಗೂ ಮಾಜಿ ಯೋಧರಿಗೆ ಸನ್ಮಾನ ಸಮಾರಂಭ ಮಕ್ಕಂದೂರಿನ ಸಹಕಾರ ಕಲ್ಯಾಣ ಮಂಟಪದಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ತಿರಸ್ಕಾರಕ್ಕೆ ಒಳಗಾದ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಕೆಲಸ ಮಾಡಬೇಕಿದೆ. ವಿಕಲತೆ ಎಂಬದನ್ನು ಶಾಪ, ಕರ್ಮ ಎಂದು ತಿಳಿಯದೆ ಪ್ರೀತಿ, ವಿಶ್ವಾಸ ತೋರಿ ಅವಕಾಶ ಕಲ್ಪಿಸಿಕೊಟ್ಟರೆ ಅವರೂ ಕೂಡ ಉತ್ತಮ ವ್ಯಕ್ತಿಗಳಾಗುತ್ತಾರೆ. ಈ ನಿಟ್ಟಿನಲ್ಲಿ ಸಾಧ್ಯ ಟ್ರಸ್ಟ್ ಮುಂದಡಿ ಯಿಟ್ಟಿದ್ದು, ಉತ್ತಮ ಬೆಳವಣಿಗೆ ಯಾಗಿದ್ದು, ಸಮಾಜಕ್ಕೆ ಪ್ರೇರಣೆ ಯಾಗಲಿದೆ ಎಂದು ಹಾರೈಸಿದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿಯಾಗಿದ್ದು, ತಾನು ಸಚಿವನಾಗಿದ್ದಾಗ 150ನೇ ಹುಟ್ಟು ಹಬ್ಬವನ್ನು ರಾಜ್ಯಾದ್ಯಂತ ಆಚರಣೆ ಮಾಡಿದ್ದೇವೆ. ಯುವ ನೀತಿ ಸಿದ್ಧಪಡಿಸಿದ್ದು, ಅದು ಜಾರಿಯಾಗಿಲ್ಲ ಎಂದು ವಿಷಾದಿಸಿದರು. ವಿವೇಕಾನಂದರ ಜಯಂತಿಯಂದೇ ವಿಕಲಚೇತನರ ಪ್ರತಿಭೆ ವಿಕಾಸಗೊಳಿಸುವ ನಿಟ್ಟಿನಲ್ಲಿ ಟ್ರಸ್ಟ್ ರಚನೆಯಾಗಿರುವದು ಉತ್ತಮ ಬೆಳವಣಿಗೆ ಟ್ರಸ್ಟ್‍ಗೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ಹೇಳಿದರು.
ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ, ವಿಶೇಷ ಚೇತನರ ಏಳಿಗೆಗಾಗಿ ಶ್ರಮಿಸುವದರೊಂದಿಗೆ ಯೋಧರಿಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿರುವದು ಹೆಮ್ಮೆಯ ವಿಚಾರ. ಎಲ್ಲರಿಗೂ ಯೋಧರಾಗಿ ದೇಶ ಕಾಯುವ ಕೆಲಸ ಸಿಗುವದಿಲ್ಲ. ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ವಿಎಸ್‍ಎಸ್‍ಎನ್ ಅಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ಮಾತನಾಡಿ, ಅಂಗವಿಕಲತೆ, ಮನೋವಿಕಲತೆ ದೊಡ್ಡ ಸಮಸ್ಯೆಯಾಗಿದೆ. ರಾಷ್ಟ್ರದ ಒಟ್ಟು ಜನಸಂಖ್ಯೆಯಲ್ಲಿ ಶೇ. 2.5 ರಷ್ಟು ವಿಕಲ ಚೇತನರಿದ್ದಾರೆ. ಇಂತವರನ್ನು ಪ್ರೀತಿಯಿಂದ ಕಾಣಬೇಕು. ಸೂಕ್ತ ಚಿಕಿತ್ಸೆ ನೀಡಿ, ಉತ್ತಮ ತರಬೇತಿ ನೀಡಿದರೆ ಸಮಾನ ಅವಕಾಶ ದೊರೆಯು ವಂತಾಗುತ್ತದೆ ಎಂದು ಹೇಳಿದರು. ತಮ್ಮ ಸಂಸಾರವನ್ನು ಬಿಟ್ಟು ನಾಡಿನ ಜನರನ್ನು ಕಾಯುವ ಯೋಧರಿಗೆ ಸಲಾಂ ಹೇಳಿರುವದು ಮಹಾತ್ಕಾರ್ಯ ವೆಂದರು. ಕೊಡವ ಸಮಾಜ ಅಧ್ಯಕ್ಷ ನಾಪಂಡ ಕಾಳಪ್ಪ ಮಾತನಾಡಿ, ಸಾಧ್ಯ ಟ್ರಸ್ಟ್ ಸಮಾಜ ಮುಖಿ ಕೆಲಸ ಮಾಡುತ್ತಿದೆ. ಇದು ಎಲ್ಲರಿಂದಲೂ ಸಾಧ್ಯವಾಗುವದಿಲ್ಲ. ಹಿಂಜರಿಯುವದೇ ಹೆಚ್ಚು ಎಂದು ಹೇಳಿದರು. ಈ ಕಾರ್ಯಕ್ಕೆ ಕೈಯ್ಯಲ್ಲಾದ ಸಹಾಯ ಮಾಡುವದಾಗಿ ಹೇಳಿದರು.
ಮನೋವೈದ್ಯ ಡಾ. ಪಿ.ಹೆಚ್. ವೆಂಕಟರಾಜ್ ಆಚಾರ್ಯ ಮಾತನಾಡಿ, ನಾವು ಸಂತೋಷ ವಾಗಿದ್ದಷ್ಟು ನಮ್ಮ ಸಂತೋಷಕ್ಕೆ ಕಾರಣರಾದವರನ್ನು ಮರೆತು ಬಿಡುತ್ತೇವೆ. ಈ ಸಾಲಿನಲ್ಲಿ ವಿಶೇಷ ಚೇತನರು ಹಾಗೂ ಯೋಧರು ನಿಲ್ಲುತ್ತಾರೆ. ಎಂದಿಗೂ ಇವರುಗಳನ್ನು ಮರೆಯಬಾರದೆಂದು ಹೇಳಿದರು.
ಗೌಡ ಸಮಾಜದ ಅಧ್ಯಕ್ಷ ಕುಂಭಗೌಡನ ಉತ್ತಪ್ಪ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮವನ್ನು ಕೂರ್ಗ್ ಫೌಂಡೇಶನ್ ಟ್ರಸ್ಟಿ ಗಂಗಾ ಚಂಗಪ್ಪ, ಉದ್ಘಾಟಿಸಿದರು. ವೇದಿಕೆಯಲ್ಲಿ ಜಿ.ಪಂ. ಸದಸ್ಯ ಯಾಲದಾಳು ಪದ್ಮಾವತಿ, ತಾ.ಪಂ. ಸದಸ್ಯ ರಾಯ್ ತಮ್ಮಯ್ಯ, ಗ್ರಾ.ಪಂ. ಅಧ್ಯಕ್ಷೆ ಲಕ್ಕಪ್ಪನ ಕಾವೇರಮ್ಮ, ಹರೀಶ್, ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಗ್ರಾ.ಪಂ. ಉಪಾಧ್ಯಕ್ಷ ಕನ್ನಿಕಂಡ ಶ್ಯಾಂ ಸುಬ್ಬಯ್ಯ, ಹೊಸಪೇಟೆಯ ನಿವೃತ್ತ ಪ್ರಾಂಶುಪಾಲ ಮಹಮ್ಮದ್ ಸಾದಿಕ್ ಇನ್ನಿತರರಿದ್ದರು.
ಸಾಧ್ಯ ಶಾಲೆ ಸ್ಥಾಪಕಿ ಕೆ.ಟಿ. ಆರತಿ ಸ್ವಾಗತಿಸಿ, ನಿರೂಪಿಸಿದರೆ, ಟ್ರಸ್ಟ್‍ನ ಅಧ್ಯಕ್ಷ ಬಿ.ಎನ್. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ಗ್ರಾಮದ 35 ಮಂದಿ ಮಾಜಿ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.