ಸುಂಟಿಕೊಪ್ಪ, ಜ. 12: ನಮ್ಮ ಸುಂಟಿಕೊಪ್ಪ ಬಳಗದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ‘ನಮ್ಮೂರಿನ ನಮ್ಮವರಿಗಾಗಿ’ ಎಂಬ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾದ ಹೋಬಳಿ ಮಟ್ಟದ ಫುಟ್ಬಾಲ್ ಫೈಸ್ ಟೂರ್ನಿಗೆ ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಚಾಲನೆ ನೀಡಿದರು.
ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸುಂಟಿಕೊಪ್ಪ ಕೊಡಗಿನ ಕೊಲ್ಕತ್ತ ಎಂಬ ಪ್ರಖ್ಯಾತಿ ಹೊಂದಿದ್ದು ಫುಟ್ಬಾಲ್ ಪಂದ್ಯಾಟಕ್ಕೆ ತನ್ನದೇ ಇತಿಹಾಸವನ್ನು ನಿರ್ಮಿಸಿದೆ. ಇತ್ತೀಚಿನ ದಿನಗಳಲ್ಲಿ ಫುಟ್ಬಾಲ್ ಪಂದ್ಯಾಟವು ನಶಿಸಿ ಹೋಗುತ್ತಿರುವದು ವಿಷಾದನೀಯ ಎಂದರಲ್ಲದೇ, ಆ ನಿಟ್ಟಿನಲ್ಲಿ ನಮ್ಮ ಸುಂಟಿಕೊಪ್ಪ ಬಳಗವು ಫುಟ್ಬಾಲ್ ಕ್ರೀಡೆಯನ್ನು ಉಳಿಸುವ ನಿಟ್ಟಿನಲ್ಲಿ ಟೂರ್ನಿಯನ್ನು ಆಯೋಜಿಸಿರುವದು ಶ್ಲಾಘನೀಯ ಎಂದರು.
ಉದ್ಘಾಟನಾ ಪಂದ್ಯದಲ್ಲಿ ಕೆಇಬಿ ರೈಸರ್ಸ್ ತಂಡವು ಗ್ರೌಂಡ್ ಫೈಟರ್ಸ್ ತಂಡವನ್ನು ಸೋಲಿಸುವದರೊಂದಿಗೆ ಸೆಮಿಫೈನಲ್ ಹಂತಕ್ಕೆ ತಲುಪಿತು. ಪಂದ್ಯದ ಮೊದಲಾರ್ಧದ 2ನೇ ನಿಮಿಷದಲ್ಲಿ ಕೆಇಬಿ ತಂಡದ ಸಿಯಾಬ್ ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ ಮೊದಲಾರ್ಧದ 9ನೇ ನಿಮಿಷದಲ್ಲಿ ಗ್ರೌಂಡ್ ಫೈಟರ್ಸ್ ತಂಡದ ಸೂರ್ಯ ಗೋಲು ಹೊಡೆಯುವದರೊಂದಿಗೆ ಸಮಬಲ ಸಾಧಿಸಿದವು. ದ್ವಿತೀಯಾರ್ಧದಲ್ಲಿ ಯಾವದೇ ಗೋಲು ಬಾರದೇ ಟ್ರೈ ಬ್ರೇಕರ್ ನಡೆದು ಕೆಇಬಿ ತಂಡವು 3-2 ಗೋಲುಗಳಿಂದ ಜಯಗಳಿಸಿ ಸೆಮಿಫೈನಲ್ ಹಂತಕ್ಕೆ ತಲುಪಿತು.
ಎರಡನೇ ಪಂದ್ಯವು ಕೊಡಗರಹಳ್ಳಿ ಲಯನ್ಸ್ ಮತ್ತು ಗರಗಂದೂರು ಕಿಂಗ್ಸ್ ನಡುವೆ ನಡೆದು ಗರಗಂದೂರು ತಂಡವು 3-2 ಗೋಲಿಗಳಿಂದ ಜಯಗಳಿಸಿ ಸೆಮಿಫೈನಲ್ ಹಂತಕ್ಕೆ ಲಗ್ಗೆಯಿಟ್ಟಿತು.