ಮಡಿಕೇರಿ, ಜ. 20: ಮಡಿಕೇರಿ ತಾಲೂಕು ವ್ಯಾಪ್ತಿಯ ಬಹುತೇಕ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯರು ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಕುರಿತು ಮಡಿಕೇರಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿಅಸಮಾಧಾನ ವ್ಯಕ್ತಗೊಂಡಿತು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಉಮಾಪ್ರಭು, ನಾಪೋಕ್ಲು ಭಾಗದಲ್ಲಿ ಕೆಲವು ಅಂಗನವಾಡಿಯಲ್ಲಿ ಮಕ್ಕಳನ್ನು ಹೊಡೆದು, ನೀರು ಹಾಕಿ ಬಲವಂತವಾಗಿ ಮಲಗಿಸಲಾಗುತ್ತಿದ್ದು, ಈ ಬಗ್ಗೆ ಹಲವು ದೂರುಗಳು ಬಂದಿರುವದಾಗಿ ಹೇಳಿದರು. ಸದಸ್ಯ ಕೊಡಪಾಲ ಗಣಪತಿ ಮಾತನಾಡಿ, ಬಹುತೇಕ ಅಂಗನವಾಡಿಗಳಲ್ಲಿ ಶಿಕ್ಷಕಿಯರು ಸಮಯ ನಿರ್ವಹಣೆ ಮಾಡುತ್ತಿಲ್ಲ ಎಂದರು. ಮತ್ತೋರ್ವ ಸದಸ್ಯ ಶ್ರೀಧರ್ ಅವರು, ಯಾವಾಗ ನೋಡಿದರೂ ಅಂಗನವಾಡಿಗಳಲ್ಲಿ ಶಿಕ್ಷಕಿಯರು ಇರುವದೇ ಇಲ್ಲ. ಕೇಳಿದರೆ ಅಲ್ಲಿ ಸಭೆ-ಇಲ್ಲಿ ಸಭೆ ಎಂದು ಸಬೂಬು ನೀಡುತ್ತಾರೆ. ಸಭೆಗಳಿಗೆ ತೆರಳುವ ವೇಳೆ ಸಾರ್ವಜನಿಕರಿಗೂ ಸ್ಪಷ್ಟ ಮಾಹಿತಿ ನೀಡದ ಪರಿಣಾಮ ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಈ ಹಿನ್ನೆಲೆ ಸಭೆಗಳಿಗೆ ತೆರಳುವ ಬಗ್ಗೆ ಮಕ್ಕಳ ಪೋಷಕರಿಗೆ ಮಾಹಿತಿ ಲಭ್ಯವಾಗುವ ರೀತಿಯಲ್ಲಿ ಶಿಕ್ಷಕಿಯರು ಗಮನ ಹರಿಸಬೇಕೆಂದರು.
ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಧಿಕಾರಿ ದಮಯಂತಿ ಅವರು, ಬಾಲವಿಕಾಸ ಸಮಿತಿ, ಅಂಗನವಾಡಿ ಶಿಕ್ಷಕಿಯರ ಬಗ್ಗೆ ದೂರುಗಳಿದ್ದರೆ ಸಂಗ್ರಹಿಸಿ ಇಲಾಖೆಗೆ ನೀಡಿದರೆ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಮಾತೃಪೂರ್ಣ ಯೋಜನೆ ಬೇಡ
ಮಾತೃಪೂರ್ಣ ಯೋಜನೆಯಡಿ ಬಾಣಂತಿಯರು ಸೌಲಭ್ಯವನ್ನು ಪಡೆಯಲು ಮುಂದೆ ಬರುತ್ತಿಲ್ಲ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ದೂರ ದೂರ ಮನೆಗಳಲ್ಲಿ ಇರುವಂತಹ ಬಾಣಂತಿಯರು ಮಾತೃಪೂರ್ಣ ಯೋಜನೆಯ ಸವಲತ್ತಿಗಾಗಿ ಅಂಗನವಾಡಿಗಳಿಗೆ ನಡೆದುಕೊಂಡು ಬರಬೇಕಾಗಿರುವದರಿಂದ ಈ ಯೋಜನೆ ಫಲ ಕೊಡುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸರಕಾರ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆ ನೀಡುವದಾದರೆ ಬಾಣಂತಿಯರನ್ನು ಅಂಗನವಾಡಿ ಗಳಿಗೆ ಕರೆದೊಯ್ಯುವ ವ್ಯವಸ್ಥೆಯನ್ನು ಮಾಡಬೇಕು. ಇಲ್ಲವಾದರೆ ಈ ಯೋಜನೆ ಇಲ್ಲಿಗೆ ಬೇಡ ಎಂಬದಾಗಿ ಸರಕಾರಕ್ಕೆ ವರದಿ ನೀಡಲು ಸಭೆ ತೀರ್ಮಾನಿಸಿತು.
ಔಷಧಿ ಕೊಡುವವರಿಲ್ಲ
ಸದಸ್ಯ ಅಪ್ರುರವೀಂದ್ರ ಮಾತನಾಡಿ, ಕಾರ್ಮಿಕ ವರ್ಗವೇ ಅಧಿಕವಿರುವ ಅರೆಕಾಡಿನಲ್ಲಿ ಅನಾರೋಗ್ಯಕ್ಕೊಳಗಾದರೆ ಔಷಧ ಕೊಡುವವರೆ ಇಲ್ಲ. ಆರೋಗ್ಯ ಇಲಾಖೆ ನಿಯೋಜಿಸುವ ನರ್ಸ್‍ಗಳು ಕಾಳಜಿ ತೋರುತ್ತಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ಆಸಕ್ತಿ ವಹಿಸಿ ಕೆಲಸ ಮಾಡಿದರೆ ಇಂತಹ ತಪ್ಪುಗಳಾಗುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಜೀವನ್ ಕುಮಾರ್, ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಇದ್ದರು.