ವೀರಾಜಪೇಟೆ, ಜ. 20: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಸಂಘದ ಬಗ್ಗೆ ತಿಳಿವಳಿಕೆ ಮತ್ತು ಸಾಮಾನ್ಯ ನಾಗರಿಕ ಸಮಾಜಕ್ಕೆ ಸಂಘದ ಸ್ಥೂಲ ಪರಿಚಯ ಮಾಡುವ ಒಂದು ದಿನದ ಕಾರ್ಯಕ್ರಮವನ್ನು ಅಮ್ಮತ್ತಿಯಲ್ಲಿ ಹಮ್ಮಿಕೊಂಡಿತು.ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಅಮ್ಮತ್ತಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಂತಿಯ ಸಹ ಪ್ರಚಾರಕ್ ನಾರಾಯಣ ಮಾತನಾಡಿ, 1925 ವಿಜಯ ದಶಮಿಯಂದು ಮಹಾರಾಷ್ಟ್ರದ ನಾಗಪುರದ ಮೋಹಿತೆವಾಡದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ವಾತಂತ್ರ ಹೋರಾಟಗಾರ ಮತ್ತು ವೈಧ್ಯಕೀಯ ಪದವಿ ಮುಗಿಸಿದ ಕೇಶವ ಬಲಿರಾಮ್ ಹೆಗ್ಗಡೆವಾರ್ ಅವರಿಂದ ಸ್ಥಾಪನೆಯಾಯಿತು. ಇಂದು ವಿಶ್ವದ ಅತಿ ದೊಡ್ಡ ಸ್ವಯಂಸೇವಕ ಸಂಘವಾಗಿ ಹೊರಹೊಮ್ಮಿರುತ್ತದೆ. ದೇಶದಲ್ಲಿ 56 ಸಾವಿರ ಶಾಖೆ ಹೊಂದಿರುವ ಸಂಘದ ಕಾರ್ಯ ವ್ಯಾಪ್ತಿಯು ತಾಯಿ ನಾಡಿಗೆ ನಿಶ್ವಾರ್ಥ ಸೇವೆ ಸಲ್ಲಿಸುವ ಸ್ವಯಂಸೇವಕರು ಇಡಿ ಜಗತ್ತೇ ಒಂದು ಕುಟುಂಬ ಧ್ಯೇಯ ಮಂತ್ರ ಸಾರುವ ‘ವಸುಧೈವ ಕುಟುಂಬಕಂ’ ಸಿದ್ಧಾಂತದೊಂದಿಗೆ ಶ್ರಮಿಸುತ್ತಿದೆ ಎಂದರು. ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್, ಭಜರಂಗದಳ ಮತ್ತು ಇತರ ಸಂಘದ ಸಂಸ್ಥೆ ಗಳೊಂದಿದೆ ದೇಶವು ಪ್ರಗತಿಪಥದಲ್ಲಿ ಸಾಗಲು ಅನುವು ಮಾಡಿಕೊಡಲು ಶ್ರಮ ವಹಿಸುತ್ತಿದೆ ದೇಶದಲ್ಲಿ ನಡೆಯುತ್ತಿರುವ ಸಾಮಾಜಿಕ, ಅರ್ಥಿಕ ಭೌತಿಕ ಚಿಂತನೆಗಳನ್ನು ಅವಲೋಕಿಸಿಕೊಂಡು ದೇಶ ಭದ್ರತೆಗೆ ಸಹಕಾರ ನೀಡುತ್ತಿದೆ. ಸಂಘವು ಜಾಗತಿಕ ಎಲ್ಲಾ ರಂಗಗಳಲ್ಲೂ ತನ್ನ ಕಾರ್ಯಧಕ್ಷತೆಯನ್ನು ವಿಸ್ತರಿಸಿಕೊಂಡು ಜನಮಾನಸದಲ್ಲಿ ಅಜರಾಮರವಾಗಿ ನೆಲೆ ನಿಂತಿದೆ ಎಂದರು.

ಕೊಡಗು ಜಿಲ್ಲಾ ಪ್ರಚಾರಕ್ ಅವಿನಾಶ್ ಮಾತನಾಡಿ, ಸಂಘವು ಸಾಮಾಜಿಕ ಹಿತ ಚಿಂತನೆಯೊಂದಿಗೆ ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಧಕ್ಷತೆ ಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದರು. ಗುರುಕುಲದ ಭೋದನೆ ಯೊಂದಿಗೆ ಅಖಿಲಾ ಭಾರತೀಯ ವಿದ್ಯಾರ್ಥಿ ಪರಿಷತ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ವನಗಳಲ್ಲಿ ವಾಸ ಮಾಡುತ್ತಿರುವ ಅದಿವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ವನವಾಸಿ ಕಲ್ಯಾಣ ಕಾರ್ಯಕ್ರಮ ರೈತಾಪಿ ವರ್ಗದ ಏಳಿಗೆಗೆ ಭಾರತೀಯ ಕಿಶಾನ್ ಸಂಘ ಸ್ಥಾಪನೆ ಮಾಡಲಾಗಿದ್ದು, ಸಾವಯವ ಕೃಷಿ ಪದ್ಧತಿಗೆ ಪ್ರೇರೆಪಿಸಲಾಗುತ್ತಿದೆ. ಕಾರ್ಮಿಕ ವರ್ಗದ ಅಭಿವೃದ್ದಿಗೆ ಭಾರತೀಯ ಮಜ್ದೂರ್ ಸಂಘ, ರಾಜಕೀಯ ಕ್ಷೇತ್ರದಲ್ಲಿ ಭಾ.ಜ.ಪ. ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಸಂಘವು ದೇಶವನ್ನು ಉನ್ನತ ಪಥದಲ್ಲಿ ಅಭಿವೃದ್ಧಿ ಹೊಂದಲು ಸಹಕಾರ ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಸಂಘ ಚಾಲಕ್ ಪ್ರಿನ್ಸ್ ಗಣಪತಿ, ನಿಕಟಪೂರ್ವ ಜಿಲ್ಲಾ ಸಂಘ ಚಾಲಕ್ ಮಚ್ಚಾರಂಡ ಮಣಿ ಕಾರ್ಯಪ್ಪ ಸೇವಾ ಪ್ರಚಾರಕ್ ಕುಟ್ಟಂಡ ಮಿರನ್ ಕಾವೇರಪ್ಪ ಉಪಸ್ಥಿತರಿದ್ದರು. ಸಂಘದ ಪರಿಚಯ ವರ್ಗ ಕಾರ್ಯಕ್ರಮಕ್ಕೆ ಜಿಲ್ಲಾ ಮತ್ತು ತಾಲೂಕು ಸಂಘದ ಸ್ವಯಂಸೇವಕರು ಹಾಗೂ ಸಂಘದ ಅಭಿಮಾನಿಗಳು ಕೊಡಗಿನ ವಿವಿಧ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.