ಮಡಿಕೇರಿ, ಜ. 19 : ಕೊಡಗು ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳವು ಜಾತ್ರೆಯಲ್ಲಿ ತೆರೆದುಕೊಂಡಿರುವ ಅಂಗಡಿಯಂತಾಗಿದ್ದು, ಪಕ್ಷದ ಮುಖಂಡರು ಒಂದು ತಿಂಗಳೊಳಗೆ ಎಲ್ಲ ಗೊಂದಲ ಸರಿಪಡಿಸುವ ಮೂಲಕ ನಿಷ್ಠಾವಂತರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕೆಂದು ಆಗ್ರಹಿಸಿರುವ ಕಾರ್ಯಕರ್ತರು ತಪ್ಪಿದಲ್ಲಿ ಮುಂದೆ ತಮ್ಮದೇ ಹಾದಿಯಲ್ಲಿ ಕ್ರಮಿಸಲಿರುವದಾಗಿ ಎಚ್ಚರಿಕೆ ನೀಡಿದ್ದಾರೆ.ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಬಿ.ವೈ. ರಾಜೇಶ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಮಾನ ಮನಸ್ಕರ ಸಭೆಯಲ್ಲಿ ಜೆಡಿಎಸ್ ಮುಖಂಡರಿಗೆ ಅಂತಿಮ ಸಂದೇಶ ರವಾನಿಸುತ್ತಾ, ನಾಯಕರು ಸ್ಪಂದಿಸದಿದ್ದರೆ ಮುಂದೆ ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವದಾಗಿ ಸಾರಿದರು.
ಪಕ್ಷದ ಹಿರಿಯ ಮುಖಂಡ ನಾರಾಯಣ ರೈ
(ಮೊದಲ ಪುಟದಿಂದ) ಮಾತನಾಡಿ, ಕಳೆದ ಎರಡು ದಶಕಗಳಿಂದ ಪಕ್ಷಕ್ಕಾಗಿ ಕೈಯಿಂದ ಹಣ ಖರ್ಚು ಮಾಡಿಕೊಂಡು ದುಡಿದವರನ್ನು ಕಡೆಗಣಿಸಿ, ಪಕ್ಷದ ಹಣವನ್ನು ಕಿಸೆಗೆ ಇಳಿಸಿಕೊಂಡು ಕಾರ್ಯಕರ್ತರಲ್ಲಿ ಒಡಕು ಮೂಡಿಸುವವರಿಗೆ ಮಣೆ ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂಥ ಮುಖಂಡರಿಂದ ಜಿಲ್ಲೆಯಲ್ಲಿ ಯಾವದೇ ಸ್ಥಾನೀಯ ಸಂಸ್ಥೆಗಳಲ್ಲಿ ಕೂಡ ಇಂದು ಜೆಡಿಎಸ್ ಪ್ರತಿನಿಧಿ ಗಳನ್ನು ಕಾಣದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಎರೆಹುಳ ಹುಲಿಯಂತೆ..! : ರಾಜ್ಯ ಜೆಡಿಎಸ್ ಯುವ ವಿಭಾಗದ ಕಾರ್ಯದರ್ಶಿ ಜಶೀರ್ ಅಹಮ್ಮದ್ ಮಾತನಾಡಿ, ಮಳೆಗಾಲದಲ್ಲಿ ಭೂಮಿಯೊಳಗಿಂದ ಎರೆಹುಳುಗಳು ಹೊರಬರುವಂತೆ, ಚುನಾವಣೆ ಸಂದರ್ಭದಲ್ಲಿ ಕೆಲವರು ಎರೆಹುಳಗಳಾದರೂ ಹುಲಿಗಳಂತೆ ಕಾಣಿಸಿಕೊಂಡು, ಜೆಡಿಎಸ್ನ ನಿಷ್ಠಾವಂತ ಕಾರ್ಯಕರ್ತರವನ್ನು ತುಳಿಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸದಿದ್ದರೆ ಮುಂದೆ ತಕ್ಕ ಹಿನ್ನಡೆ ಅನುಭವಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ದುಃಖದಿಂದ ಸಭೆ : ನಗರ ಜೆಡಿಎಸ್ ಅಧ್ಯಕ್ಷ ಹಾಗೂ ರಾಜ್ಯ ಯುವ ಜನತಾದಳ ಪ್ರಮುಖ ಬಿ.ವೈ. ರಾಜೇಶ್ ಮಾತನಾಡಿ, ಇದುವರೆಗೆ ಕೈಯಿಂದ ಹಣ ಖರ್ಚು ಮಾಡಿ ಪಕ್ಷವನ್ನು ಕಟ್ಟಿ ಬೆಳೆಸಿರುವ ನಿಷ್ಠಾವಂತರನ್ನು ಕಡೆಗಣಿಸಲಾಗುತ್ತಿದ್ದು, ಇಂಥ ನಡೆಯನ್ನು ಇನ್ನು ಸಹಿಸುವದಿಲ್ಲವೆಂದು ಇಂದು ಅತ್ಯಂತ ಬೇಸರದಿಂದ ಸಮಾನ ಮನಸ್ಕರ ಸಭೆ ಕರೆದಿರುವದಾಗಿ ನುಡಿಯುತ್ತಾ, ಈ ಬಗ್ಗೆ ದುಃಖವಿದೆ ಎಂದರು.
ನೇರ ವಾಗ್ದಾಳಿ : ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಸೇರಿದಂತೆ ಯುವ ಜನತಾದಳ ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್ನ ಕೆಲವು ಮುಖಂಡರ ವಿರುದ್ಧ ನೇರ ವಾಗ್ದಾಳಿ ನಡೆಸಿದ ಅವರು ಮುಂದಿನ ಒಂದು ತಿಂಗಳೊಳಗೆ ಗೊಂದಲ ಸರಿಪಡಿಸಿದಿದ್ದರೆ, ಮುಂದೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವದು ಎಂದು ಘೋಷಿಸಿದರು.
ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟಿ ಬೆಳೆಸಿದ ಪ್ರಾಮಾಣಿಕ ಕಾರ್ಯಕರ್ತ ರಿಂದ ಕೆಲವರು ನಾಯಕರಾಗಿದ್ದು, ಅಂಥವರಿಂದ ಕಾರ್ಯಕರ್ತರು ನೋವು ಅನುಭವಿಸುವದ್ದನ್ನು ಕಂಡು, ಇಂದು ಸೂಕ್ತ ಪರಿಹಾರ ಕಂಡುಕೊಳ್ಳಲು ಸಭೆ ಆಯೋಜಿಸ ಲಾಗಿದೆ ಎಂದು ನೆನಪಿಸಿದರು.
ಪಕ್ಷ ನಿಷ್ಠರನ್ನು ಕಡೆಗಣಿಸಿ ಅಪರಾಧ ಹಿನ್ನೆಲೆಯವರಿಗೆ, ಜೆಡಿಎಸ್ನಲ್ಲಿ ಸೇರಿಸಿಕೊಂಡು ಒಬ್ಬೊಬ್ಬರಿಗೆ ಮೂರ್ನಾಲ್ಕು ಸ್ಥಾನಗಳನ್ನು ಕಲ್ಪಿಸಲಾಗಿದೆ ಎಂದು ಕಿಡಿಕಾರಿದ ರಾಜೇಶ್ ಮುಂದಿನ ದಿನಗಳಲ್ಲಿ ಇಂಥ ಅವಕಾಶವಾದಿಗಳಿಗೆ ಕಾರ್ಯಕರ್ತರು ತಕ್ಕ ಪಾಠ ಕಲಿಸುವದಾಗಿ ಸುಳಿವು ನೀಡಿದರು.
ಪಕ್ಷದ ಯುವ ಪ್ರಮುಖ ಸುಖೇಶ್ ಚಂಗಪ್ಪ, ಗಾಳಿಬೀಡು ಗಣೇಶ್, ಲೀಲಾ ಶೇಷಮ್ಮ, ಯಶವಂತ್, ಮಂಜುನಾಥ್ ಸೇರಿದಂತೆ ಅನೇಕರು ಸಭೆಯಲ್ಲಿ ಕಾರ್ಯಕರ್ತರ ನೋವಿನ ಬಗ್ಗೆ ಗಮನ ಸೆಳೆದರು. ಇಂದಿನ ಸಭೆಯಲ್ಲಿ ಯಾವೊಬ್ಬ ಜೆಡಿಎಸ್ ನಾಯಕರು ಕಾಣಿಸಿಕೊಂಡಿಲ್ಲವೆಂದು ಅಸಮಾ ಧಾನ ತೋಡಿಕೊಂಡರು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರೂ, ಜೆಡಿಎಸ್ನ ಯಾವ ನಾಯಕರು ಕಾಣಿಸಿಕೊಳ್ಳ ದಿದ್ದದ್ದು ಸಾಕಷ್ಟು ಸಂಶಯ ಹುಟ್ಟು ಹಾಕಿತ್ತು.
ವೇದಿಕೆಯಲ್ಲಿ ನಗರಸಭೆಯ ಮಾಜೀ ಸದಸ್ಯ ಅಶ್ರಫ್, ಹಿರಿಯರಾದ ಅಬ್ದಲ್ ರೆಹಮಾನ್ ಮೊದಲಾದವರು ಹಾಜರಿದ್ದರು. ಯಶವಂತ್ ಕಾರ್ಯಕ್ರಮ ನಿರೂಪಿಸಿದರೆ, ಗಂಗಮ್ಮ ಪ್ರಾರ್ಥಿಸಿದರು. ಸುನಿಲ್ ವಂದಿಸಿದರು.
ತಾ. 29 ರಂದು ಯುವ ಜೆಡಿಎಸ್ ಸಮಾವೇಶ
ಮಹದಾಯಿ ಯೋಜನೆಗಾಗಿ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ತಾ. 25 ರಂದು ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂದು ನಿಗಧಿಯಾಗಿದ್ದ ಕೊಡಗು ಜಿಲ್ಲಾ ಯುವ ಜಾತ್ಯತೀತ ಜನತಾದಳದ ಜಿಲ್ಲಾ ಸಮಾವೇಶವನ್ನು ತಾ. 29ಕ್ಕೆ ಮುಂದೂಡಲಾಗಿದೆ ಎಂದು ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. 25 ರಂದು ನಡೆಯುವ ಕರ್ನಾಟಕ ಬಂದ್ಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂದರು. ಜಿಲ್ಲಾ ಜೆಡಿಎಸ್ ಯುವ ಸಮಾವೇಶ ತಾ. 29 ರಂದು ಮಡಿಕೇರಿಯ ಗೌಡ ಸಮಾಜದಲ್ಲಿ ನಡೆಯಲಿದ್ದು, ಯುವ ಘಟಕದ ರಾಜ್ಯಾದ್ಯಕ್ಷ ಮಧು ಬಂಗಾರಪ್ಪ ಹಾಗೂ ಪಕ್ಷದ ಮುಖಂಡರುಗಳು ಪಾಲ್ಗೊಳ್ಳಲಿದ್ದು, ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಪ್ರಾಥಮಿಕ ಸದಸ್ಯತ್ವ ಇಲ್ಲ
ತಟಸ್ಥ ಜನತಾದಳ ಎನ್ನುವದು ಹಾಸ್ಯಾಸ್ಪದ ಬಣವಾಗಿದ್ದು, ರಾಜಕಾರಣದಲ್ಲಿ ಕೆಲಸವಿಲ್ಲದ ನಾಲ್ಕು ಮಂದಿ ಟೀ ಕುಡಿಯುತ್ತಾ ಆಡುವ ಮಾತುಗಳಿಗೂ ಜೆಡಿಎಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲವೆಂದು ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಟೀಕಿಸಿದ್ದು, ತಟಸ್ಥರೆಂದು ಹೇಳಿಕೊಂಡು ಸಭೆ ನಡೆಸಿದ ಮಂದಿ ಜೆಡಿಎಸ್ನ ಪ್ರಾಥಮಿಕ ಸದಸ್ಯತ್ವವನ್ನೆ ಪಡೆದಿಲ್ಲ ಎಂದರು. ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರು ಇಲ್ಲದಿದ್ದರೂ, ಮುಖಂಡರು ಎನಿಸಿಕೊಂಡವರಿಗೆ ಪಕ್ಷ ಮಂತ್ರಿ ಸ್ಥಾನವನ್ನು ನೀಡಿ ಗೌರವಿಸಿದೆ. ಈ ಬಗ್ಗೆ ತಟಸ್ಥರ ಹೆಸರಿನಲ್ಲಿ ಸಭೆ ನಡೆಸಿದವರಿಗೆ ಗೌರವ ಇರಬೇಕಾಗಿತ್ತು ಎಂದು ಸಂಕೇತ್ ಪೂವಯ್ಯ ತಿಳಿಸಿದರು
ಸುದ್ದಿಗೋಷ್ಟಿಯಲ್ಲಿ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಜೆ. ಜಾಶಿರ್, ಮಡಿಕೇರಿ ನಗರಾಧ್ಯಕ್ಷ ರವಿಕಿರಣ್ ರೈ ಹಾಗೂ ಪ್ರಧಾನ ಕಾರ್ಯದರ್ಶಿ ಅಜಿತ್ ಉಪಸ್ಥಿತರಿದ್ದರು.