ವೀರಾಜಪೇಟೆ, ಜ. 20: ಸರಕಾರದಿಂದ ಬಂದ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಮುಂದಿನ ಅನುದಾನದಲ್ಲಿ ಇನ್ನು ಹೆಚ್ಚು ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ಸಮೀಪದ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ-ಮರೂರು ಬಲ್ಲಚಂಡ ಹರಿಜನ ಕಾಲೋನಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. 10 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ಕಾಂಗಿರ ಕುಂಟುಂಬಸ್ಥರ ಐನ್ಮನೆಗೆ ಹೋಗುವ ರಸ್ತೆಗೆ ಜಿಲ್ಲಾ ಪಂಚಾಯಿತಿ ಅನುದಾನ ರೂ. 1 ಲಕ್ಷ 70 ಸಾವಿರ, ಶಾಸಕರ ಅನುದಾನ ರೂ. 3 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ಮತ್ತು ನುಚ್ಚು ಬಾಣೆಯಿಂದ ಅರಮೇರಿ ಗ್ರಾಮಕ್ಕೆ ಶಾಸಕರ ಅನುದಾನ ರೂ. 5 ಲಕ್ಷದ ಕಾಮಗಾರಿಗೆ ಡಾಂಬರೀಕರಣ ಹಾಗೂ ಮಂಡೇಟಿರ ಸೇತುವೆ ಬಳಿಯಿಂದ ಕುಂಜಲಗೇರಿ ರಸ್ತೆಗೆ ರೂ. 5 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಗ್ರಾಮೀಣ ಪ್ರದೇಶದ ರಸ್ತೆಗಳೆಲ್ಲವು ಹೊಂಡ-ಗುಂಡಿಗಳಾಗಿ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಸರಕಾರದಿಂದ ಬಂದ ಅನುದಾನವನ್ನು ಹೆಚ್ಚು ರಸ್ತೆ ಕಾಮಗಾರಿಗಳಿಗೆ ಬಳಸಲಾಗುತ್ತಿದ್ದು, ಮುಂದಿನ ಅನುದಾನದಲ್ಲಿ ಗ್ರಾಮೀಣ ಭಾಗದ ಇನ್ನು ಹೆಚ್ಚು ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವದು ಎಂದರು.
ಭೂಮಿಪೂಜೆ ಸಂದರ್ಭ ಗ್ರಾಮಸ್ಥರಾದ ಎಂ. ಪ್ರತಾಪ್, ಗಣಪತಿ, ಪೂವಯ್ಯ, ಅಪ್ಪಚ್ಚು, ಪಿ. ರಾಕೇಶ್, ಎಂ. ಮದು ದೇವಯ್ಯ, ಎ. ಸತೀಶ್, ಶರಣು, ಸಿ.ಪಿ. ಪ್ರವೀಣ್, ಎಂ. ವಸ್ಮಾ, ಸುಗುಣ ಚಂಗಪ್ಪ, ಹೆಚ್.ಜೆ. ಪೊನ್ನಪ್ಪ, ಹೆಚ್.ಕೆ. ಕುಮಾರ, ಸುಬ್ರಮಣಿ ಹಾಗೂ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.