ಹೆಬ್ಬಾಲೆ, ಜ. 20: ಅವರೆದಾಳ ಗ್ರಾಮದಲ್ಲಿ ಹುಲ್ಲು ತುಂಬಿಸಿಕೊಂಡು ಹಾಸನಕ್ಕೆ ಲಾರಿ ತೆರಳುತ್ತಿದ್ದ ಸಂದರ್ಭ ನಿನ್ನೆ ರಾತ್ರಿ ವಿದ್ಯುತ್ ತಂತಿ ಸ್ಪರ್ಶಗೊಂಡು ಲಾರಿ ಬೆಂಕಿಗೆ ಆಹುತಿಯಾಗಿದೆ.
ಅಗತ್ಯಕ್ಕಿಂತ ಹೆಚ್ಚಿನ ಹುಲ್ಲು ತುಂಬಿಸಿಕೊಂಡು ಹೋಗುವ ವೇಳೆ ದೊಡ್ಡಕುಂದ ಪಿ.ಯು. ಕಾಲೇಜು ಮುಂಭಾಗ ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ವಿದ್ಯುತ್ ಲೈನ್ ಹುಲ್ಲಿಗೆ ಸ್ಪರ್ಶಿಸಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಚಾಲಕ ಕೆಳಗೆ ಇಳಿದು ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಗಾಳಿಯ ರಭಸಕ್ಕೆ ಬೆಂಕಿಯ ಧಗೆ ತೀವ್ರಗೊಂಡಿತು. ಗ್ರಾಮಸ್ಥರು ಕೂಡ ಬೆಂಕಿ ನಂದಿಸಲು ಯತ್ನಿಸಿದರೂ ಯಾವದೇ ಪ್ರಯೋಜನವಾಗಲಿಲ್ಲ. ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಬೆಂಕಿ ಉರಿದ ಪರಿಣಾಮ ಹುಲ್ಲು ಹಾಗೂ ಲಾರಿ ಸಂಪೂರ್ಣ ಸುಟ್ಟು ಹೋಗಿದೆ. ಲಾರಿಯ ಚಕ್ರಗಳು ಬೆಂಕಿಯಿಂದ ಸಿಡಿದ ಪರಿಣಾಮ ಬೆಂಕಿ ಜ್ವಾಲೆ ತೀವ್ರ ಗೊಂಡಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಕಲಗೂಡು ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಬೆಂಕಿ ನಂದಿಸಿದರು. ಆದರೆ ಅಷ್ಟರಲ್ಲಿ ಬಹುತೇಕ ಸುಟ್ಟು ಹೋಗಿತ್ತು.