ಗೋಣಿಕೊಪ್ಪಲು. ಜ. 20. ಅರಣ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ತೇಗ,ನೀಲಗಿರಿ ಇತ್ಯಾದಿ ಮರಗಳನ್ನು ಬೆಳೆಸಿದ್ದು ಇವುಗಳು ಅಂತರ್ಜಲದ ನೀರನ್ನು ಯಥೇಚ್ಚವಾಗಿ ಬಳಸುತ್ತಿದ್ದು, ಇದರಿಂದಾಗಿ ಅರಣ್ಯ ನೀರಿಲ್ಲದೆ ಬರಡಾಗಿದೆ. ತಕ್ಷಣವೇ ಸರಕಾರ ಈ ಮರಗಳನ್ನು ತೆರವುಗೊಳಿಸಿ ವನ್ಯಪ್ರಾಣಿ ಸ್ನೇಹಿ ಮರಗಳಾದ ಮಾವು, ಹಲಸು, ಬಿದಿರು,ಕಬ್ಬು ಇತ್ಯಾದಿ ಹಣ್ಣಿನ ಗಿಡಗಳ ಮರಗಳನ್ನು ನೆಡಬೇಕು. ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ಅರಣ್ಯಾಧಿಕಾರಿಗಳಿಗೆ ಮನವಿ ಸಲಿಸಿದೆ. ಇತ್ತೀಚೆಗೆ ಸಿದ್ದಾಪುರದ ಕೊಡವ ಸಾಂಸ್ಕøತಿಕ ಸಂಘದ ಸಭಾಂಗಣದಲ್ಲಿ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯಗಳ ಮನವಿಯನ್ನು ಅರಣ್ಯಾಧಿಕಾರಿಗಳಿಗೆ ನೀಡಿ ಅನುಷ್ಠಾನಕ್ಕೆ ತಿಂಗಳ ಗಡುವು ನೀಡಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮುಂದಾಳತ್ವದಲ್ಲಿ ರೈತ ಮುಖಂಡರು ಮಡಿಕೇರಿಯ ಅರಣ್ಯ ಭವನದಲ್ಲಿ ಸಿಸಿಎಫ್ ಲಿಂಗರಾಜು ಅವರಿಗೆ ಮನವಿ ಸಲ್ಲಿಸಿದರು.

ಕಾಡಿನಿಂದ ನಾಡಿಗೆ ಬಂದಿರುವ ವನ್ಯ ಮೃಗಗಳು ಹಾಗೂ ಕಾಡಾನೆಗಳು ರೈತರ ತೋಟದಲ್ಲಿ ಕಾಯಂ ನೆಲೆಸಿದ್ದು,ಇವುಗಳಿಂದ ರೈತರ ಸಾಕಷ್ಟು ತೋಟಗಳು ಹಾನಿಗೀಡಾಗಿರುವದಲ್ಲದೇ ಹಲವು ಕಾರ್ಮಿಕರು ಇವುಗಳ ದಾಳಿಗೆ ಒಳಗಾಗಿ ಸಾವನಪ್ಪಿರುವದಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಇವುಗಳನ್ನು ಕಾಡಿಗಟ್ಟುವ ಕ್ರಮವನ್ನು ತಕ್ಷಣ ಕೈಗೊಳ್ಳಬೇಕು.

ಅಲ್ಲದೇ ಅವುಗಳು ಮತ್ತೆ ನಾಡಿಗೆ ಪ್ರವೇಶಿಸದಂತೆ ಭದ್ರತೆಯಾಗಿ ಆವರಣದ ಸುತ್ತ ರೈಲ್ವೇ ಕಂಬಿಗಳನ್ನು,ವೈಜ್ಞಾನಿಕ ಕಂದಕ, ಸೊಲಾರ್ ಬೇಲಿ ಹಾಗೂ ಗೇಟ್‍ಗಳನ್ನು ಅಳವಡಿಸಬೇಕು. ಅರಣ್ಯ ಕಾಯಲು ಸಾಕಷ್ಟು ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನೇಮಕ ಮಾಡಬೇಕು. ವನ್ಯ ಪ್ರಾಣಿಗಳ ಹಾವಳಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸಂಬಂಧಿಸಿದಂತೆ ಕ್ರಮವಾಗಿ ಕೃಷಿ ಇಲಾಖೆ ತೋಟಗಾರಿಕಾ ಇಲಾಖೆ, ಕಾಫಿ ಮಂಡಳಿ ಹಾಗೂ ಸಂಬಾರ ಮಂಡಳಿ ಅಧಿಕಾರಿಗಳು ನಿಗದಿಪಡಿಸುವ ಪರಿಹಾರ ನೀಡಬೇಕು.

ವನ್ಯ ಜೀವಿಗಳಿಂದ ಆಗಿರುವ ನಷ್ಟ ಸಂಬಂಧ ಅರಣ್ಯ ಇಲಾಖೆ ರೈತರಿಗೆ ಪರಿಹಾರ ನೀಡುವ ಸಂದರ್ಭ ಅನುಸರಿಸುತ್ತಿರುವ ಸರಕಾರ ನಿಗದಿಪಡಿಸಿರುವ ಅವೈಜ್ಞಾನಿಕ ದಯಾತ್ಮಕ ಪರಿಹಾರ ನೀತಿಯನ್ನು ತಕ್ಷಣವೇ ಬದಲಿಸಿ ಸಮರ್ಪಕ ನಷ್ಟ ಪರಿಹಾರ ನೀಡಬೇಕು. ವನ್ಯ ಪ್ರಾಣಿ ನಷ್ಟ ಸಂಬಂಧ ಪರಿಹಾರ ಕೋರಿ ಅರ್ಜಿ ಸಲ್ಲಿಸುವ ಸಂದರ್ಭ ಅರ್ಜಿಯೊಂದಿಗೆ ಆರ್‍ಟಿಸಿ ಹಾಗೂ ಛಾಯಾಚಿತ್ರಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು ಎಂಬ ನೀತಿ ಸರಕಾರ ಅನುಸರಿಸುತ್ತಿದ್ದು,ಇದರಿಂದ ರೈತರಿಗೆ ಸಾಕಷ್ಟು ಸಮಯ ಹಾಗೂ ಹಣ ವ್ಯಯವಾಗುತ್ತಿದೆ. ಇನ್ನು ಮುಂದಕ್ಕೆ ರೈತರು ಕೇವಲ ನಷ್ಟವಾಗಿರುವ ಜಾಗದ ಸರ್ವೆ ನಂಬರ್ ಮಾತ್ರ ನಮೂದಿಸಿ ಅರ್ಜಿ ಸಲ್ಲಿಸುವ ಸಂದರ್ಭ ಉಳಿದಂತೆ ಆರ್‍ಟಿಸಿ ಹಾಗೂ ಛಾಯಾ ಚಿತ್ರಗಳನ್ನು ಇಲಾಖೆಯೇ ತನ್ನ ಖರ್ಚಿನಿಂದ ಭರಿಸಿ ಅರ್ಜಿ ಪೂರ್ಣಗೊಳಿಸಬೇಕು.

ಜಿಲ್ಲೆಯಲ್ಲಿ ಸುಮಾರು 40 ಕ್ಕೂ ಹೆಚ್ಚು ರೈತರು, ಕಾರ್ಮಿಕರು ಹಾಗೂ ಅಮಾಯಕ ನಾಗರಿಕರು ವನ್ಯಜೀವಿಗಳ ಧಾಳಿಯಿಂದ ತಮ್ಮ ಜೀವ ಕಳೆದುಕೊಂಡಿರುತ್ತಾರೆ. ಈ ಸಂದರ್ಭ ಇಲಾಖೆ ಕೇವಲ 5 ಲಕ್ಷ ರೂ.ಗಳ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆ. ಇದು ಖಂಡನೀಯ. ಮುಂದೆ ಇಂತಹಾ ಸಾವು ಸಂಭವಿಸಿದ ಸಂದರ್ಭ ಅವರನ್ನು ಅವಲಂಬಿಸಿರುವ ಕುಟುಂಬಕ್ಕೆ ಕನಿಷ್ಟ 2 ಕೋಟಿ ರೂಪಾಯಿಗಳ ಪರಿಹಾರ ಸರಕಾರ ನೀಡಬೇಕು. ಹಾಗೂ ಆ ಕುಟುಂಬದ ಓರ್ವ ಸದಸ್ಯರಿಗೆ ಸರಕಾರಿ ಹುದ್ದೆ ನೀಡಬೇಕು. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾರ್ಯನಿರತ ಪೊಲೀಸ್ ಪೇದೆಯೊಬ್ಬರು ಹಲ್ಲೆಗೊಳಗಾಗಿ ನಿಧನರಾದ ಸಂದರ್ಭ ಅವರ ಕುಟುಂಬಕ್ಕೆ 2 ಕೋಟಿ ರೂ.ಗಳ ಪರಿಹಾರ ನೀಡಿ ಮಾನವೀಯತೆ ಮೆರೆದಿರುವ ವಿಚಾರವನ್ನು ಕರ್ನಾಟಕ ಸರಕಾರ ಕಾರ್ಮಿಕರು, ರೈತರು ಹಾಗೂ ನಾಗರಿಕರಿಗೆ ಸಂಬಂಧಿಸಿದಂತೆ ಜಾರಿಗೆ ತಂದು ಮಾನವೀಯತೆ ಮೆರೆಯಬೇಕು.

ವನ್ಯ ಪ್ರಾಣಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಸಂದರ್ಭ ಆಸ್ಪತ್ರೆ ಖರ್ಚು ವೆಚ್ಚಗಳನ್ನು ಸರಕಾರವೇ ಭರಿಸಬೇಕು ಹಾಗೂ ಅವರಿಗೆ ನೀಡುವ ಪರಿಹಾರವನ್ನು ಏರಿಕೆ ಮಾಡಬೇಕು. ಗಾಯಾಳುಗಳಿಗೆ ಕನಿಷ್ಟ ರೂ. 5 ಲಕ್ಷ ಪರಿಹಾರವನ್ನು ತಕ್ಷಣ ನೀಡಬೇಕು ಎಂಬಿತ್ಯಾದಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ರೈ ಸಂಘದ ಮುಖಂಡರಾದ ಅಜ್ಜಮಾಡ ಚಂಗಪ್ಪ, ತೀತರಮಾಡ ಸುನೀಲ್, ಅಜ್ಜಮಾಡ ಸಿದ್ದು ಉಪಸ್ಥಿತರಿದ್ದರು.