ಭಾಗಮಂಡಲ, ಜ. 20: ಕಾವೇರಿ ಕ್ಷೇತ್ರ ತಲಕಾವೇರಿ ಹಾಗೂ ಭಾಗಮಂಡಲ ಅಶುಚಿತ್ವಗೊಂಡರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಎಚ್ಚರಿಕೆ ನೀಡಿದ್ದಾರೆ.ಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು. ಕಾವೇರಿ ಕ್ಷೇತ್ರವನ್ನು ಸ್ವಚ್ಛವಾಗಿಡುವದು ಗ್ರಾಮ ಪಂಚಾಯಿತಿ ಹಾಗೂ ದೇವಸ್ಥಾನ ಸಮಿತಿಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ತ್ರಿವೇಣಿ ಸಂಗಮದ ಬಳಿ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ಶುಚಿತ್ವಕ್ಕೆ ಸಂಬಂಧಿಸಿದಂತೆ ಮೂರು ಭಾಷೆಗಳಲ್ಲಿ ನಾಮಫಲಕವನ್ನು ಅಳವಡಿಸಬೇಕು ಎಂದು ಸೂಚಿಸಿದರು.

ಪಾರ್ಕಿಂಗ್ ಸ್ಥಳದಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಿ ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಲೇವಾರಿಗೆ ಜಾಗ ಗುರುತಿಸಿ ಕಂದಾಯ ಇಲಾಖೆ ಈ ಬಗ್ಗೆ ಗಮನ ಹರಿಸಿ ತನಗೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನವಿತ್ತರು.

ಪ್ರತಿದಿನ ರಾತ್ರಿ ಸರಕಾರಿ ಬಸ್‍ಗಳಲ್ಲಿ ಕಸದ ರಾಶಿ ಬರುತ್ತಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮಕೈಗೊಳ್ಳಬೇಕು.

(ಮೊದಲ ಪುಟದಿಂದ) ಪೊಲೀಸ್ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಬೇಕೆಂದು ಆದೇಶಿಸಿದರು. ತ್ರಿವೇಣಿ ಸಂಗಮ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ರಾತ್ರಿ ವೇಳೆ ಇಬ್ಬರು ವಾಚ್‍ಮೆನ್‍ಗಳನ್ನು ನಿಯೋಜನೆ ಮಾಡಬೇಕು. ಧರ್ಮಸ್ಥಳ ಸಂಘ, ಶಾಲಾ ಮಕ್ಕಳನ್ನು ಬಳಸಿ ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಸ್ವಚ್ಛತೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಹಾಗೂ ದೇವಸ್ಥಾನ ಸಮಿತಿ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳಬೇಕು. ಐ.ಬಿ. ಬಳಿಯಿರುವ ದೇವಾಲಯಕ್ಕೆ ಸಂಬಂಧಿಸಿದ 13.2 ಎಕರೆ ಜಾಗದಲ್ಲಿ ಯಾತ್ರಾರ್ಥಿಗಳಿಗೆ ಬೇಕಾದ ಮೂಲಭೂತ ಸೌಲಭ್ಯ, ಬಸ್ ನಿಲ್ದಾಣ, ವಸತಿ ಹಾಗೂ ಅಡುಗೆ ವ್ಯವಸ್ಥೆ ಒಳಗೊಂಡು ಹೆಚ್ಚಿನ ಸೌಲಭ್ಯ ಕಲ್ಪಿಸಲು ಮುಂದಿನ 20 ವರ್ಷಗಳ ಅವಧಿಗೆ ಭಕ್ತಾದಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಕ್ರಿಯಾಯೋಜನೆ ತಯಾರಿಸಿ ಒಂದು ವಾರದೊಳಗಾಗಿ ತನಗೆ ತಲಪಿಸುವಂತೆ ದೇವಾಲಯದ ಕಾರ್ಯನಿರ್ವ ಹಣಾಧಿಕಾರಿ ಜಗದೀಶ್ ಕುಮಾರ್ ಅವರಿಗೆ ಸೂಚಿಸಿದರು. ಕ್ರಿಯಾಯೋಜನೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಕ್ರಿಯಾ ಯೋಜನೆ ತಯಾರಿಸಿ ನೀಡುವದಾಗಿ ಜಗದೀಶ್ ಕುಮಾರ್ ಹೇಳಿದರು.

ಅರ್ಚಕ ರಾಜೇಶಾಚಾರ್ ಮಾತನಾಡಿ, ಕಾವೇರಿ ನದಿಯ ಎರಡು ಬದಿಗಳಲ್ಲಿ 10 ಕಿ.ಮೀ.ವರೆಗೆ ಹೂಳೆತ್ತಿ ನದಿ ಅಗಲೀಕರಣ ಮಾಡಬೇಕು. ಬ್ರಹ್ಮಗಿರಿಗೆ ಕೈ ಚೀಲಗಳನ್ನು ತೆಗೆದುಕೊಂಡು ಹೋಗುವದನ್ನು ನಿಷೇಧಿಸಬೇಕು. ಭಾಗಮಂಡಲದ ನಾಗಬನವನ್ನು ಅಭಿವೃದ್ಧಿಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ದೇವಾಲಯವನ್ನು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಅಮೆ ಪದ್ಮಯ್ಯ ಕೋರಿದರು. ದೇವಾಲಯದ ಎರಡು ಬದಿ ದ್ವಾರ ಅಳವಡಿಸುವಂತೆ ಸುನಿಲ್ ಪತ್ರಾವೋ ಮನವಿ ಮಾಡಿದರು. ಬಾಗಿಲು ಅಳವಡಿಕೆ ಕೆಲಸ ಬಹುತೇಕ ಮುಗಿಯುವ ಹಂತದಲ್ಲಿದೆ ಎಂದು ಜಗದೀಶ್ ಕುಮಾರ್ ಹೇಳಿದರು.

ಈ ಸಂದರ್ಭ ತಹಶೀಲ್ದಾರ್ ಕುಸುಮಾ, ಪಿಡಿಓ ಅಶೋಕ್, ಜಿ.ಪಂ. ಸದಸ್ಯ ಕುಮಾರ್, ಗ್ರಾ.ಪಂ. ಸದಸ್ಯ ರಾಜಾರೈ, ರವಿ ಹೆಬ್ಬಾರ್ ಕುದುಪಜೆ ಪ್ರಕಾಶ್, ತಲಕಾವೇರಿ-ಭಾಗಮಂಡಲ ದೇವಾಲಯ ಭಕ್ತಜನ ಸಂಘದ ಪ್ರಮುಖರು ಇದ್ದರು.

ಕರಿಕೆಗೆ ಭೇಟಿ: ಮುಂಬರುವ ವಿಧಾನಸಭಾ ಚುನಾವಣೆ ಸುಲಲಿತವಾಗಿ ನಡೆಸುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಕರಿಕೆಯ ವಿವಿಧ ಮತಗಟ್ಟೆಗಳನ್ನು ಪರಿಶೀಲಿಸಿದರು. ಮತಗಟ್ಟೆಯ ಕುಂದುಕೊರತೆಗಳನ್ನು ಪರಿಶೀಲಿಸಲು ಅಧಿಕಾರಿಗಳೊಂದಿಗೆ ಗ್ರಾಮದ ಚೆತ್ತುಕಾಯ ಎಳ್ಳುಕೊಚ್ಚಿ, ತೊಟಂ ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಅಂಗವಿಕಲರಿಗೆ ದಾರಿ, ಬಾಗಿಲುಗಳ ಭದ್ರತೆಯನ್ನು ಪರಿಶೀಲನೆ ಮಾಡಿ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಲು ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ಕುಸುಮ ಅವರಿಗೆ ನಿರ್ದೇಶನ ನೀಡಿದರು. ನಂತರ ಗಡಿಭಾಗದಲ್ಲಿ ಕಾರ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು ಈ ಸಂದರ್ಭದಲ್ಲಿ ಕಂದಾಯ ಪರಿವೀಕ್ಷಕಿ ಶೀಲಾ, ಗ್ರಾಮಲೆಕ್ಕಾಧಿಕಾರಿ ಪ್ರಭಾಕರ್, ಗ್ರಾಮ ಸಹಾಯಕ ಜನಾರ್ದನ ಹಾಜರಿದ್ದರು. -ಕೆ.ಡಿ. ಸುನಿಲ್, ಸುಧೀರ್.