ಮಡಿಕೇರಿ, ಜ. 20 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ತಾ.25 ರಂದು ತಜ್ಞರೊಂದಿಗೆ ಸಂವಾದ ಮತ್ತು ತಾ.29 ರಂದು ದಿ.ಪಂದ್ಯಂಡ ಬೆಳ್ಯಪ್ಪ ಸ್ಮರಣೆ ಹಾಗೂ ವಿಚಾರ ಮಂಡನೆ ಕಾರ್ಯಕ್ರಮ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ನೂತನ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ, ತಾ.25 ರಂದು ನಗರದ ದೇವರಾಜ ಅರಸು ಭವನದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಬಾಳುಗೋಡು ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಉದ್ಘಾಟಿಸಲಿದ್ದಾರೆ ಎಂದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಡಾ. ಉಳ್ಳಿಯಡ ಎಂ. ಪೂವಯ್ಯ, ಬಾಚರಣಿಯಂಡ ಪಿ. ಅಪ್ಪಣ್ಣ, ಚಿರಿಯಪಂಡ ರಾಜಾ ನಂಜಪ್ಪ, ಉಳ್ಳಿಯಡ ಡಾಟಿ ಪೂವಯ್ಯ, ಐಮುಡಿಯಂಡ ರಾಣಿ ಮಾಚಯ್ಯ, ಅಡ್ಡಂಡ ಸಿ. ಕಾರ್ಯಪ್ಪ, ಬಿದ್ದಾಟಂಡ ಎಸ್. ತಮ್ಮಯ್ಯ ಹಾಗೂ ಗೌರವ ಅತಿಥಿಯಾಗಿ
(ಮೊದಲ ಪುಟದಿಂದ) ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಮಾತಂಡ ಸಿ. ಮೊಣಪ್ಪ ಪಾಲ್ಗೊಳ್ಳಲಿದ್ದಾರೆ. ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮತ್ತು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ತಾ.29 ರಂದು ದಿ.ಪಂದ್ಯಂಡ ಬೆಳ್ಯಪ್ಪ ಸ್ಮರಣೆ ಹಾಗೂ ವಿಚಾರ ಮಂಡನೆ ಕಾರ್ಯಕ್ರಮ ನಡೆಯಲಿದೆ.
ನಗರದ ದಿ. ಪಂದ್ಯಂಡ ಬೆಳ್ಯಪ್ಪ ಸ್ಮಾರಕ ಭವನದಲ್ಲಿ ಬೆಳಗ್ಗೆ 10.30 ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಆರ್.ಸೀತಾರಾಮ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಹಾಗೂ ಎಂ.ಪಿ.ಸುನಿಲ್ಸುಬ್ರಮಣಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಮಾಂಗೆರ ಪದ್ಮಿನಿ ಪೊನ್ನಪ್ಪ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷರಾದ ಅಪ್ಪಚೆಟ್ಟೊಳಂಡ ಮನು ಮುತ್ತಪ್ಪ ಹಾಗೂ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪಂದ್ಯಂಡ ಬೆಳ್ಯಪ್ಪ ಅಧ್ಯಯನ ಕೃತಿಯ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪತ್ರಿಕೋದ್ಯಮಕ್ಕೆ ಕೊಡಗು ಪತ್ರಿಕೆಯ ಕೊಡುಗೆ ಎಂಬ ವಿಷಯದ ಕುರಿತು ವಿಚಾರಮಂಡನೆ ಮಾಡಲಿದ್ದು, ಸಾಹಿತಿಗಳಾದ ಷಂಶುದ್ದೀನ್ ಸ್ವಾತಂತ್ರ್ಯ ಚಳುವಳಿಯಲ್ಲಿ ಬೆಳ್ಯಪ್ಪ ಅವರ ಪಾತ್ರ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷರಾದ ಮನು ಮುತ್ತಪ್ಪ ಸಹಕಾರ ಕ್ಷೇತ್ರದಲ್ಲಿ ಪಂದ್ಯಂಡ ಬೆಳ್ಯಪ್ಪ ಎಂಬ ವಿಷಯದ ಕುರಿತು ವಿಚಾರಮಂಡನೆ ಮಾಡಲಿದ್ದಾರೆ ಎಂದು ಪೊನ್ನಪ್ಪ ಮಾಹಿತಿ ನೀಡಿದರು.
ಅಕಾಡೆಮಿಯ ಸದಸ್ಯ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ ನೂತನ ಆಡಳಿತ ಮಂಡಳಿ ವಿಭಿನ್ನ ಕಾರ್ಯಕ್ರಮಗಳನ್ನು ನೀಡಲು ಚಿಂತನೆ ನಡೆಸಿದ್ದು, ಸಂಗ್ರಹ ಯೋಗ್ಯವಾದ ತ್ರೈಮಾಸಿಕ ಕೊಡವ ಪತ್ರಿಕೆಯನ್ನು ಕೂಡ ಹೊರ ತರಲಾಗುವದೆಂದರು.
ರಿಜಿಸ್ಟ್ರಾರ್ ಉಮರಬ್ಬ ಮಾತನಾಡಿ ವಾರ್ಷಿಕ ಅನುದಾನ ರೂ. 60 ಲಕ್ಷಗಳಲ್ಲಿ 45 ಲಕ್ಷ ರೂ. ಬಿಡುಗಡೆಯಾಗಿದ್ದು, ಯೋಜನೇತರ ಅನುದಾನ 11 ಲಕ್ಷ ರೂ. ನೀಡುವದನ್ನು ರದ್ದು ಪಡಿಸಲಾಗಿದೆ ಎಂದರು. ವಾರ್ಷಿಕ 1 ಕೋಟಿ ರೂ. ಅನುದಾನ ನೀಡುವಂತೆ ಅಕಾಡೆಮಿ ಈಗಾಗಲೇ ಸರಕಾರಕ್ಕೆ ಮನವಿ ಸಲ್ಲಿಸಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯ ಮುದ್ದಯ್ಯ ಉಪಸ್ಥಿತರಿದ್ದರು.