*ಸಿದ್ದಾಪುರ, ಜ. 20: ಸ್ವಾತಂತ್ರ್ಯ ಲಭಿಸಿ 70 ವರ್ಷಗಳು ಕಳೆದರೂ ಕುಡಿಯುವ ನೀರು, ರಸ್ತೆ, ಮನೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಮಾಲ್ದಾರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತಟ್ಟಳ್ಳಿ ಗಿರಿಜನ ಹಾಡಿಯ ನಿವಾಸಿಗಳು ಈ ಬಾರಿಯ ಚುನಾವಣೆಯನ್ನು ಬಹಿಷ್ಕ ರಿಸುವದಾಗಿ ಎಚ್ಚರಿಸಿದ್ದಾರೆ.

ಕಳೆದ ಹಲವು ದಶಕಗಳಿಂದ ತಟ್ಟಳ್ಳಿ ಹಾಡಿಯಲ್ಲಿ ಅಂದಾಜು 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದೆ. 150ಕ್ಕೂ ಹೆಚ್ಚು ಮಂದಿ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಜೀವನ ನಡೆಸುತ್ತಿ ದ್ದಾರೆ. ಇಲ್ಲಿನ ನಿವಾಸಿಗಳು ಕುಡಿಯುವ ನೀರು, ರಸ್ತೆ, ಮನೆ, ವಿದ್ಯುತ್, ಹಕ್ಕುಪತ್ರ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿ ದ್ದಾರೆ ಎಂದು ಹಾಡಿಯ ಮುಖಂಡ ಶಂಕರ ಆರೋಪ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿಗಾಗಿ ಸುಮಾರು ಎರಡು ಕಿ.ಮೀ ದೂರ ಕ್ರಮಿಸಿ ತರ ಬೇಕಾದ ಸನ್ನಿವೇಶ ನಿರ್ಮಾಣ ವಾಗಿದೆ. ಸಮೀಪದಲ್ಲಿರುವ ಕೆಲವು ಕಾಫಿ ತೋಟದ ಮಾಲೀಕರು ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ನೀರನ್ನು ನೀಡುತ್ತಿದ್ದಾರೆ. ಮಳೆಗಾಲ ಸಂದರ್ಭ ಲಭ್ಯವಾಗುವ ನೀರನ್ನು ಉಪಯೋಗಿಸಿ ಬದುಕು ನಡೆಸುತ್ತಿದ್ದು, ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.

ಗುಡಿಸಲಿನಲ್ಲಿ ವಾಸವಾಗಿದ್ದು, ಗ್ರಾಮಕ್ಕೆ ಇದುವರೆಗೂ ವಿದ್ಯುತ್ ಸಂಪರ್ಕ ವ್ಯವಸ್ಥೆ ಒದಗಿಸಲಿಲ್ಲ. ಹಕ್ಕುಪತ್ರವೂ ನೀಡಿಲ್ಲ. ರಸ್ತೆ ಪರಿಸ್ಥಿತಿ ಹೇಳತೀರದು. ಇಷ್ಟೆಲ್ಲಾ ಸಮಸ್ಯೆ ಗಳಿದ್ದರೂ ಜಿಲ್ಲಾಡಳಿತ ಇತ್ತ ಕಡೆ ತಿರುಗಿಯೂ ನೋಡಿಲ್ಲ. ಚುನಾವಣೆ ಸಂದರ್ಭದಲ್ಲಿ ಹಾಡಿಗೆ ಬರುವ ಜನಪ್ರತಿನಿಧಿಗಳು, ರಾಜಕಾರಣಿಗಳು ಸುಳ್ಳು ಭರವಸೆಗಳನ್ನು ನೀಡಿ ಮುಂದಿನ ಚುನಾವಣೆಯಲ್ಲಿ ಪ್ರತ್ಯಕ್ಷ ರಾಗುತ್ತಾರೆ. ಸರಕಾರದ ಯಾವದೇ ಸೌಲಭ್ಯಗಳನ್ನು ನೀಡದಿದ್ದರೂ ಮತದಾನದ ಹಕ್ಕು ಮಾತ್ರ ನೀಡಿದ್ದಾರೆ. ಜಿಲ್ಲೆಯಲ್ಲಿರುವ ಟಿಬೆಟ್ ನಿರಾಶ್ರಿತರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಸರಕಾರ ಅರಣ್ಯದಲ್ಲಿ ಹುಟ್ಟಿ ಬೆಳೆದು ಅರಣ್ಯವನ್ನು ರಕ್ಷಣೆ ಮಾಡುತ್ತಿರುವ ಆದಿವಾಸಿಗಳಿಗೆ ಯಾವದೇ ಸೌಲಭ್ಯ ಗಳನ್ನು ನೀಡದೆ ವಂಚಿಸುತ್ತಿದ್ದು, ಕಾಡು ಪ್ರಾಣಿಗಳಿಗಿಂತ ಕಡೆಯಾಗಿ ಬದುಕು ಸಾಗಿಸುತ್ತಿದ್ದೇವೆ. ಜಿಲ್ಲಾಡಳಿತ ಕುಡಿಯುವ ನೀರಿನ ವ್ಯವಸ್ಥೆ ಯಾದರೂ ಕಲ್ಪಿಸದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಎಚ್ಚರಿಸಿದ್ದಾರೆ.

ಕುಡಿಯುವ ನೀರಿಗಾಗಿ ಹಲವು ಬಾರಿ ಪ್ರತಿಭಟನೆ ಹೋರಾಟಗಳನ್ನು ಮಾಡಿದೆಯಾದರೂ ಯಾವದೇ ಪ್ರಯೋಜನವಾಗಿಲ್ಲ. ಮನೆ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸದ ಇಲ್ಲಿನ ಗ್ರಾಮ ಪಂಚಾಯಿತಿ ಕಂದಾಯ ಮಾತ್ರ ಕೇಳುತ್ತಿದ್ದು, ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಿ ಗ್ರಾಮ ಪಂಚಾಯಿತಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆÉ ಎಂದು ತಿಳಿಸಿದ್ದಾರೆ. ಈ ಸಂದರ್ಭ ಹಾಡಿಯ ಪ್ರಮುಖರಾದ ಲಕ್ಷ್ಮಿ, ಶಿವಣ್ಣ, ಲಿಂಗಪ್ಪ, ರಮೇಶ, ಕೆಂಚಮ್ಮ, ಕುಮಾರಿ, ಪಾರ್ವತಿ, ಗೌರಿ ಮತ್ತಿತರರು ಇದ್ದರು.

- ಅಂಚೆಮನೆ ಸುಧಿ