ಮಡಿಕೇರಿ, ಜ. 20: ಐತಿಹಾಸಿಕ ಕ್ಷೇತ್ರ ಕೇರಳದ ಉಳಿಕಲ್‍ನಲ್ಲಿರುವ ಶ್ರೀ ಆದಿ ಬೈತೂರಪ್ಪ ದೇವಸ್ಥಾನಕ್ಕೆ ಕೊಡಗಿನಿಂದ ತೆರಳುವ ದೇವರ ಉಪಾಸಕರು (ತಿರುವಾಳಕಾರರು) ಹಾಗೂ ಭಕ್ತರ ಅನುಕೂಲಕ್ಕಾಗಿ ಅಲ್ಲಿನ ದೇವತಕ್ಕರಾದ ಪುಗ್ಗೇರ ಕುಟುಂಬಸ್ಥರು ಅಂದಾಜು ರೂ. 50 ಲಕ್ಷ ವೆಚ್ಚದಲ್ಲಿ ನೂತನ ವಸತಿ ನಿಲಯ ನಿರ್ಮಿಸಿದ್ದು, ತಾ. 22ರಂದು (ನಾಳೆ) ಲೋಕಾರ್ಪಣೆಗೊಳ್ಳಲಿದೆ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ದಾನಿಗಳ ನೆರವಿನಿಂದ ಈಗಾಗಲೇ ಅರ್ಧಕೋಟಿ ವೆಚ್ಚದ ವಸತಿನಿಲಯ ನಿರ್ಮಿಸಲಾಗಿದೆ ಎಂದು ತಕ್ಕ ಕುಟುಂಬದ ಪೊನ್ನಪ್ಪ ಹಾಗೂ ರಂಜಿ ದೇವಯ್ಯ ತಿಳಿಸಿದ್ದಾರೆ.

ತಾ.22ರಂದು (ನಾಳೆ) ಬೆಳಿಗ್ಗೆ 10.30 ಗಂಟೆಗೆ ನೂತನ ವಸತಿ ನಿಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ, ಮೇಲ್ಮನೆ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅತಿಥಿಗಳಾಗಿ ದಾನಿ ಬೊಳ್ಳಚೆಟ್ಟಿರ ಸುರೇಶ್, ‘ಪೂಮಾಲೆ’ ಸಂಪಾದಕ ಮಹೇಶ್ ನಾಚಯ್ಯ, ಚೆಪ್ಪುಡಿರ ಪೊನ್ನಪ್ಪ, ಕದ್ದಣಿಯಂಡ ಹರೀಶ್ ಬೋಪಣ್ಣ, ನಾಪಂಡ ಮುತ್ತಪ್ಪ, ಕೇರಳದ ಅಜಯಕುಮಾರ್, ಶೆರ್ಲಿ ಅಲೆಕ್ಸಾಂಡರ್, ದಿವಾಕರನ್, ಎ.ಕೆ. ವೇಣುಗೋಪಾಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದ್ದಾರೆ.

ತಾ. 24ರಂದು ವಾರ್ಷಿಕೋತ್ಸವ : ಶ್ರೀ ಬೈತೂರಪ್ಪ ದೇವರ ವಾರ್ಷಿಕೋತ್ಸವ ಈಗಾಗಲೇ ಆರಂಭಗೊಂಡಿದ್ದು, ತಾ. 22ರಂದು (ನಾಳೆ) ಪುಗ್ಗೇರ ಕುಟುಂಬದ ಎತ್ತುಪೋರಾಟ, ತಾ. 23ರಂದು ಕೊಡಗಿನ ಭಕ್ತರಿಂದ ಎತ್ತುಪೋರಾಟ ನೆರವೇರಲಿದ್ದು, ವಾರ್ಷಿಕ ದೊಡ್ಡಹಬ್ಬ ತಾ. 24ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.

ವಾರ್ಷಿಕೋತ್ಸವ ಸಂದರ್ಭ ದೇವರಿಗೆ ತುಪ್ಪಾಭಿಷೇಕ, ಎಳನೀರು ಅಭಿಷೇಕ ಸೇರಿದಂತೆ ವಿಶೇಷ ಪೂಜೆಗಳು ನಡೆಯಲಿದ್ದು, ದೇವರಿಗೆ ಎತ್ತು ಪೋರಾಟದಿಂದ ಪುಗ್ಗೇರ ಕುಟುಂಬಸ್ಥರು ಕೊಂಡೊಯ್ಯುವ ಅಕ್ಕಿಯಲ್ಲಿ ಪಾಯಸವನ್ನು ಪ್ರಸಾದವಾಗಿ ಸಮರ್ಪಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ. ತಾ. 27ರ ತನಕ ಉತ್ಸವಾದಿಗಳು ಮುಂದುವರಿಯಲಿವೆ.

ಅಲ್ಲದೆ ಕ್ಷೇತ್ರದೈವಗಳಾದ ಶ್ರೀ ಅಯ್ಯಪ್ಪ, ಬೇಟೆ ಕುರುಮ, ನೀಲಕಾಳಿ ಸನ್ನಿಧಿಗಳಲ್ಲೂ ಕಾಲಕಾಲಕ್ಕೆ ಸೇವೆಯೊಂದಿಗೆ ವಾರ್ಷಿಕ ಹಬ್ಬದಲ್ಲಿ ಕೊಡಗಿನ ಬಹುತೇಕ ಗ್ರಾಮ ದೇವಾಲಯಗಳ ದರ್ಶನಪಾತ್ರಿಗಳು (ತಿರುವಾಳಕಾರರು) ಪಾಲ್ಗೊಂಡು ಶ್ರೀ ಬೈತೂರಪ್ಪ ಕ್ಷೇತ್ರದ ಕೋಮರತಚ್ಚನಿಂದ ಅನುವಾದ ಪಡೆಯುವದು ವಿಶೇಷ ವೆಂದು ತಿಳಿಸಿದ್ದಾರೆ. ಅಂತಹವರಿಗೆ ಅನುಕೂಲಕ್ಕಾಗಿ ನೂತನ ವಸತಿ ನಿಲಯ, ಊಟದ ಮನೆ, ಸ್ನಾನಘಟ್ಟ ಮುಂತಾದ ಸೌಕರ್ಯಗಳನ್ನು ದಾನಿಗಳಿಂದ ಕಲ್ಪಿಸಲಾಗುತ್ತಿದೆ ಎಂದು ಪೊನ್ನಪ್ಪ ಮತ್ತು ತಕ್ಕ ಕುಟುಂಬದ ಹಿರಿಯ ಅಯ್ಯಪ್ಪ ತಿಳಿಸಿದ್ದಾರೆ.

ಕೇರಳ ಸರಕಾರದ ಮಲಬಾರ್ ದೇವಸ್ಥಾನ ಮಂಡಳಿಯ ಅಧೀನಕ್ಕೆ ಒಳಪಟ್ಟಿರುವ ಶ್ರೀ ಬೈತೂರಪ್ಪ ಕ್ಷೇತ್ರಕ್ಕೆ ಕೊಡಗಿನ ದಾನಿಗಳ ಸಹಕಾರದಿಂದ ಸಾಕಷ್ಟು ಅಭಿವೃದ್ಧಿಯೊಂದಿಗೆ, ಭಕ್ತರ ಅನುಕೂಲಕ್ಕಾಗಿ ಅನ್ನದಾನ ವ್ಯವಸ್ಥೆ ಏರ್ಪಡಿಸಿದ್ದು, ವಾರ್ಷಿಕೋತ್ಸವಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಸಮಾಜ ಬಾಂಧವರೊಂದಿಗೆ ಸದ್ಭಕ್ತರು ಕೂಡ ಪಾಲ್ಗೊಳ್ಳುವಂತೆ ಅವರುಗಳು ಕರೆ ನೀಡಿದ್ದು, ಆ ಮುಖಾಂತರ ದೇವರ ಕೃಪೆಗೆ ಪಾತ್ರರಾಗುವಂತೆ ಕಳಕಳಿ ವ್ಯಕ್ತಪಡಿಸಿದ್ದಾರೆ.