ಗೋಣಿಕೊಪ್ಪ ವರದಿ, ಜ. 19 : ಕಾಫಿ ಬೆಳೆ ಉತ್ಪಾದನೆ ಕುಸಿತದಿಂದ ಸಂಕಷ್ಟಕ್ಕೆ ಒಳಗಾಗಿರುವ ಬೆಳೆಗಾರನ ರಕ್ಷಣೆಗೆ ಮುಂದಾಗಬೇಕಾಗಿರುವ ಸರ್ಕಾರವು ಬೆಳೆಗಾರನ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸುವಂತೆ ಬೆಳೆಗಾರರ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಕಾಫಿ ಬೆಳೆಗಾರರ ಒಕ್ಕೂಟ, ಭಾರತೀಯ ಕಿಸಾನ್ ಸಂಘ ಹಾಗೂ ರೈತ ಸಂಘ ಸಹಯೋಗದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಬೆಳೆಗಾರರು ತೀರ್ಮಾನ ಕೈಗೊಂಡರು.ಬಜೆಟ್ ಪೂರ್ವ ಅಧಿವೇಶನ ಸಂದರ್ಭ ಸರ್ಕಾರದ ಗಮನ ಸೆಳೆಯುವಂತೆಯೂ, ಇದಕ್ಕೂ ಮುನ್ನ ಅನಾವೃಷ್ಟಿಯಿಂದ ಕಾಫಿ ಬೆಳೆಯಲ್ಲಿ ಸಂಪೂರ್ಣ ಕುಸಿತ ಕಂಡಿರುವದನ್ನು ಸರ್ಕಾರಕ್ಕೆ ದಾಖಲೆ ಸಮೇತ ತಿಳಿಸಲು ಕ್ರಮಕೈಗೊಳ್ಳುವಂತೆ ನಿರ್ಧರಿಸ ಲಾಯಿತು.

ಕಾಫಿ ಉತ್ಪಾದನೆ ವೆಚ್ಚವನ್ನು ಕೂಡ ಬೆಳೆಗಾರ ತಮ್ಮ ಕೈಯಿಂದಲೇ ಕಳೆದುಕೊಂಡು ತೀರಾ ನಷ್ಟಕ್ಕೆ ಸಿಲುಕಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಬೆಳೆಗಾರ ಸಹಕಾರ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಪಡೆದಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡುವ ಮೂಲಕ ಬೆಳೆಗಾರನ ರಕ್ಷಣೆಗೆ ಮುಂದಾಗಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಬೆಳೆಗಾರರು ಆಗ್ರಹಿಸಿದರು.

ಫಸಲು ಕುಸಿತದಿಂದ ನಷ್ಟದ ಲ್ಲಿರುವ ಬೆಳೆಗಾರ ಸಾಲ ಮರುಪಾವತಿ ಮಾಡಲಾಗದೆ ತೊಂದರೆಗೆ ಸಿಲುಕಿದ್ದಾನೆ. ಸಾಲ ಮರುಪಾವತಿಸು ವಂತೆ ಬ್ಯಾಂಕ್ ವತಿಯಿಂದ ನೋಟಿಸ್ ಜಾರಿಯಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡುವದನ್ನು ನಿಲ್ಲಿಸುವಂತೆ ಬ್ಯಾಂಕ್‍ನ ಉನ್ನತ ಅಧಿಕಾರಿಗಳ ಮೂಲಕ ಸೂಚಿಸಲು ಒಕ್ಕೂಟ ಮುಂದಾಗಬೇಕು ಎಂದು ಬೆಳೆಗಾರರು ಒತ್ತಾಯಿಸಿದರು.

ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಇತ್ತೀಚಿನ ಸ್ತಿತಿಗತಿ

(ಮೊದಲ ಪುಟದಿಂದ) ಗಮನಿಸಿದಾಗ ಹವಾಮಾನ ವೈಪರೀತ್ಯ, ಬೆಳೆ ಇಳುವರಿ ಕುಸಿತ ಗೊಂಡಿರುವದು ರೈತ ಸಂಪೂರ್ಣ ವಾಗಿ ನಷ್ಟಕ್ಕೆ ಸಿಲುಕಿರುವದನ್ನು ತೋರಿಸುತ್ತಿದೆ. ಇದನ್ನು ಮುಂದಿಟ್ಟು ಕೊಂಡು ಸರ್ಕಾರ ಬೆಳೆಗಾರನ ಸಂಪೂರ್ಣ ಸಾಲ ಮನ್ನಾಕ್ಕೆ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.

ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್ ಮಾತನಾಡಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ರಾಜಕೀಯ ರಹಿತವಾಗಿ ಹೋರಾಟ ನಡೆಸಬೇಕಿದೆ. ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಸ್ಪಂದಿಸಿದರೆ ಉತ್ತಮ ಎಂದರು.

ಕೇಂದ್ರ ಸರ್ಕಾರ ಕಾಳುಮೆಣಸು ಬೆಳೆಗಾರರ ನೋವಿಗೆ ಸ್ಪಂದಿಸಿ ಆಮದು ಶುಲ್ಕವನ್ನು ವಿಧಿಸಿರುವದು ಸ್ವಾಗತಾರ್ಹ. ಆದರೆ ಉದ್ಯಮಿಗಳು ಕಾಳುಮೆಣಸು ಆಮದನ್ನು ನಿಲ್ಲಿಸಲಿ, ಸರ್ಕಾರ ನಿಗದಿಪಡಿಸಿರುವ ಬೆಲೆಯಲ್ಲಿ ಆಮದಾದ ಕಾಳುಮೆಣಸನ್ನು ಖರೀದಿ ಮಾಡಿದಂತೆ ಲೆಕ್ಕಪತ್ರಗಳನ್ನು ಸೃಷ್ಟಿಸಿ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಸುಮಾರು 6 ಸಾವಿರ ಟನ್ ಕಾಳುಮೆಣಸು ತುಂಬಿರುವ 300 ಟ್ಯಾಂಕರ್‍ಗಳು ದೇಶ ವಿವಿಧ ಬಂದರುಗಳಲ್ಲಿ ನಿಂತಿವೆ. ಮಾರುಕಟ್ಟೆ ಪ್ರವೇಶಿಸಿ ಸಂಪೂರ್ಣ ಖಾಲಿಯಾಗುವವರೆಗೆ ದೇಶೀ ಕಾಳುಮೆಣಸಿನ ಬೆಲೆಯಲ್ಲಿ ಚೇತರಿಕೆ ಕಾಣಲು ಸಾಧ್ಯವಿಲ್ಲ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕ್ರಮಕೈಗೊಂಡರೆ ರೈತನಿಗಾಗುವ ಹಾನಿಯನ್ನು ತಪ್ಪಿಸಬಹುದು ಎಂದು ಹೇಳಿದರು.

ಲೀಡ್ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ರೈತರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸಮಸ್ಯೆಗೆ ಪರಿಹಾರವಾದ ಮೊದಲ ಹಂತವಾಗಿ ಬಡ್ಡಿಯನ್ನು ಮನ್ನಾ ಮಾಡುವಂತೆ ಮನವಿ ಮಾಡಲಾಗುವದು. ಸಂಸದ ಪ್ರತಾಪ್ ಸಿಂಹ ಸಾಂಬಾರು ಮಂಡಳಿ ಸದಸ್ಯರಾಗಿ ಕಾಳುಮೆಣಸು ವಿಚಾರವಾಗಿ ದೆಹಲಿಗೆ ಭೇಟಿ ನೀಡಿದಾಗ ಯಾವದೇ ಸ್ಪಂದನ ಸಿಕ್ಕಿಲ್ಲ ಎಂದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಮಾತನಾಡಿ, ಜಿಲ್ಲೆಯಲ್ಲಿ ಶೇ. 70 ರಷ್ಟು ಬೆಳೆಗಾರರಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ರೈತರು ತನಗೆ ಬೇಕಾದ ಬೆಳೆಗಾರರ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚಿಂತನೆ ನಡೆಸಬೇಕಿದೆ. ಚುನಾಯಿತ ಪ್ರತಿನಿಧಿಗಳ ಆಯೋಗ ರಚಿಸಿಕೊಂಡು ಭತ್ಯೆಗಳನ್ನು ಹೆಚ್ಚಿಸಿಕೊಂಡಿದ್ದಾರೆ ಎಂದರು.

ಒಕ್ಕೂಟದ ತಾಂತ್ರಿಕ ಸಲಹೆಗಾರ ಚೆಪ್ಪುಡೀರ ಶರೀ ಮಾತನಾಡಿ, ಬೆಳೆಗಾರರಿಗೆ ಸಾಲ ಮರುಪಾವತಿಸುವಂತೆ ಬ್ಯಾಂಕ್ ವತಿಯಿಂದ ನೋಟಿಸ್ ನೀಡುವದನ್ನು ನಿಲ್ಲಿಸಬೇಕು. ಒಂದೇ ಕಂತಿನಲ್ಲಿ ಸಾಲ ಮರುಪಾವತಿ ವ್ಯವಸ್ಥೆಯಲ್ಲಿ ಆಗುತ್ತಿರುವ ತಾರತಮ್ಯಗಳನ್ನು ಸರಿಪಡಿಸಬೇಕು, ಸಾಲ ಮರುಪಾವತಿಯ ಸಮಯವನ್ನು ಹೆಚ್ಚಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ರೈತರು ಕೃಷಿಗೆ ಬಳಸುವ ನದಿ ನೀರನ್ನು ಬಳಸದಂತೆ ಸರ್ಕಾರ ನಿಷೇಧ ಹೇರುವ ಸಾಧ್ಯತೆಯಿದೆ. ಇಂತಹ ನಿಯಮಗಳು ಬಂದರೆ ಒಗ್ಗಟ್ಟಾಗಿ ಹೋರಾಟ ನಡೆಸಿ ಕೃಷಿಗೆ ಬೇಕಾದ ನೀರನ್ನು ನಮ್ಮ ಹಕ್ಕು ಎಂದು ಬಳಸಲು ಮುಂದಾಗಲಿದ್ದೇವೆ ಎಂದು ಸದಸ್ಯರು ಎಚ್ಚರಿಕೆ ನೀಡಿದರು.

ಬಾಳೆಲೆ ಕೊಡವ ಸಮಾಜ ಅಧ್ಯಕ್ಷ ಮಲ್ಚೀರ ಬೋಸ್ ಮಾತನಾಡಿ, ಕಾಳುಮೆಣಸು ಉತ್ಪಾದನೆಯಲ್ಲಿ ಕೊಡಗು ಕೇರಳಕ್ಕಿಂತ ಮುಂದಿದೆ. ಆದರೆ ಸಂಪೂರ್ಣ ಲಾಭವನ್ನು ಕೇರಳದ ವ್ಯಾಪಾರಿಗಳು ಪಡೆಯುತ್ತಿದ್ದಾರೆ. ಕೊಡಗಿನ ಕಾಳುಮೆಣಸು ಮಲಬಾರ್ ಪೆಪ್ಪರ್ ಹೆಸರಿನಲ್ಲಿ ಹೊರದೇಶಗಳಿಗೆ ರಫ್ತಾಗುತ್ತಿದೆ. ಸಂಬಾರ ಮಂಡಳಿಯ ಸಬ್ಸಿಡಿಯ ಸಂಪೂರ್ಣ ಲಾಭ ನೈಜ್ಯ ಬೆಳೆಗಾರನಿಗೆ ಸಿಗದೆ ಕೇರಳದ ಉದ್ಯಮಿಗಳ ಪಾಲಾಗುತ್ತಿದೆ. ಮಂಡಳಿಯ ಪ್ರಾಂತೀಯ ಕಚೇರಿ ಜಿಲ್ಲೆಯ ಬೆಳೆಗಾರರ ಹಿತದೃಷ್ಟಿಯಲ್ಲಿ ಉತ್ತಮ. ಕೃಷಿ ಇಲಾಖೆ ಅಧಿಕಾರಿಗಳು ಕಛೇರಿಯಲ್ಲಿ ಕುಳಿತು ವಾರ್ಷಿಕ ಉತ್ಪಾದನೆಯನ್ನು ಸರ್ಕಾರಕ್ಕೆ ತಪ್ಪಾಗಿ ಸಲ್ಲಿಸುತ್ತಿದ್ದಾರೆ. ಕಾಫಿ ಮಂಡಳಿ ಅಧಿಕಾರಿಗಳು ತಯಾರಿಸುವ ಅಂದಾಜು ವಾರ್ಷಿಕ ಉತ್ಪಾದನೆ ಅಂಕಿಅಂಶಗಳನ್ನು ಗಮನಿಸಿದಾಗ ಬಹಳ ವ್ಯತ್ಯಾಸ ಕಂಡುಬಂದಿದೆ. ಇದರಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ರವಾನೆಯಾಗಿ ನಷ್ಟದಲ್ಲಿರುವ ಬೆಳೆಗಾರನಿಗೆ ಯಾವದೇ ಪರಿಹಾರ ಸಿಗುತ್ತಿಲ್ಲ ಎಂದರು.

ರೈತ ಆದೇಂಗಡ ಅಶೋಕ್ ಮಾತನಾಡಿ ಕಾಳುಮೆಣಸು ಕಲಬೆರಕೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಆದರೆ ಫಲಿತಾಂಶ ಬಹುತೇಕ ಆರೋಪಿಗಳ ಪರವಾಗಿ ಬರುವ ಸಾಧ್ಯತೆಯಿದೆ. ಇದರಿಂದಾಗಿ ಖಾಸಗಿಯಾಗಿ ಒಕ್ಕೂಟದ ಮೂಲಕ ಪ್ರತ್ಯೇಕ ಪರೀಕ್ಷೆ ನಡೆಸುವ ಅವಶ್ಯಕತೆ ಇದೆ ಎಂದರು.

ಜಿ.ಪಂ ಸದಸ್ಯ ಬಾನಂಡ ಪೃಥ್ಯು, ರೈತ ಸಂಘದ ಪ್ರ. ಕಾರ್ಯದರ್ಶಿ ಸುಜಯ್ ಬೋಪಯ್ಯ, ಕಿಸಾನ್ ಸಂಘದ ಅಧ್ಯಕ್ಷ ರಾಜೀವ್ ಬೋಪಯ್ಯ ಉಪಸ್ಥಿತರಿದ್ದರು. ದಕ್ಷಿಣ ಕೊಡಗಿನ ವಿವಿಧ ಭಾಗಗಳಿಂದ ಬೆಳೆಗಾರರು ಪಾಲ್ಗೊಂಡಿದ್ದರು. ಆದೇಂಗಡ ವಿನು ಉತ್ತಪ್ಪ ಸ್ವಾಗತಿಸಿದರು.