ಮಡಿಕೇರಿ, ಜ. 20: ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಪವಿತ್ರ ನದಿಯಂತೆ ವಿಶಾಲವಾಗಿಟ್ಟು ಕೊಂಡಲ್ಲಿ ಮೌಲ್ಯಯುತ ಜೀವನ ಸಾಧ್ಯ ಎಂದು ಖ್ಯಾತ ಸಾಹಿತಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ರಾಜ್ಯ ಅಧ್ಯಕ್ಷ ಡಾ. ದೊಡ್ಡರಂಗೇಗೌಡ ಅಭಿಪ್ರಾಯ ಪಟ್ಟರು. ನಗರದ ಕ್ರಿಸ್ಟಲ್ ಕೋರ್ಟ್‍ನ ವೇದವ್ಯಾಸ ವೇದಿಕೆಯಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಕೊಡಗು ಜಿಲ್ಲಾ ಘಟಕದ ಸಮ್ಮೇಳನದ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದರು.
ಪ್ರತಿಯೊಬ್ಬರು ಇನ್ನೊಬ್ಬ ರೊಂದಿಗೆ ಸ್ನೇಹ, ಪ್ರೀತಿ, ಮಾನವೀಯತೆಯಿಂದ ಗೆಲುವು ಸಾಧಿಸಲು ಸಾಧ್ಯ. ಯಾರೂ ಕೂಡ ಯುದ್ಧವನ್ನು ಬಯಸುವದಿಲ್ಲ. ಸಮಾಜದಲ್ಲಿ ಮಾನವೀಯತೆಗೆ ಬೆಲೆ ಕೊಟ್ಟು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಿದೆ. ಅಖಂಡ ಮಾನವತೆ ಒಂದೇ ಎಂದು ಪಂಪ ಹೇಳಿದರೆ, ಸರ್ವರಿಗೂ ಸಮಪಾಲು, ಸಮಬಾಳು ಎಂದು ಕುವೆಂಪು ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ. ಇಡೀ ಜಗತ್ತಿನಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ಗ್ರಂಥವೆಂದರೆ ಸಂವಿಧಾನ. ಸಂವಿಧಾನ ಸಕಲ ಭಾಷೆಗೂ ಮಾನ್ಯತೆ ನೀಡುತ್ತದೆ ಎಂದರು.
(ಮೊದಲ ಪುಟದಿಂದ) ಭಾರತಕ್ಕೆ ಬಹುದೊಡ್ಡ ಸಾಂಸ್ಕøತಿಕ ಪರಂಪರೆಯಿದ್ದು, ಭಾರತೀಯರಿಗೆ ಭೂಮಿ ತಾಯಿಗೆ ಸಮಾನ. ಹೆತ್ತ ತಾಯಿ, ರಾಷ್ಟ್ರಕ್ಕೆ ಗೌರವ ನೀಡುವ ಕಾರ್ಯವಾಗಬೇಕಿದ್ದು, ಅದನ್ನು ಕಾಪಾಡುವದೇ ನಮ್ಮ ಆಶಯವಾಗ ಬೇಕಿದೆ ಎಂದು ಕಿವಿ ಮಾತು ಹೇಳಿದ ಅವರು ಕೊಡವ ಹಾಗೂ ತುಳು ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರ್ಪಡೆಗೊಳಿಸಬೇಕು. ನಾವು ಸಂವಿಧಾನಾತ್ಮವಾಗಿಯೇ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರ್ಪಡೆಗೊಳಿಸಲು ಒತ್ತಾಯಿಸುತ್ತೇವೆ, ಮಾತ್ರವಲ್ಲ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇದಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಮಾತನಾಡಿ, ರಾಮಾಯಣ ಹಾಗೂ ಮಹಾಭಾರತ ಇಂದು ಹಲವರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಅದು ನಮ್ಮ ಅಖಂಡ ಭಾರತವನ್ನು ಒಗ್ಗೂಡಿಸಿದ್ದು, ಇಂದಿಗೂ ಜೀವಂತವಾಗಿದೆ. ಇದು ನಮ್ಮ ರಾಷ್ಟ್ರೀಯ ಕಾವ್ಯ.
ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಹಲವು ಮಂದಿ ನೆತ್ತರು ಹರಿಸಿದರು. ತ್ಯಾಗದಿಂದ ಸ್ವಾತಂತ್ರ್ಯವನ್ನು ಪಡೆದೆವು. ಆದರೆ ಸ್ವಾತಂತ್ರ್ಯ ಬಂದ ನಂತರ ಕೆಲವು ಅತೃಪ್ತ ಮನಸ್ಸುಗಳಿಂದ ನಮ್ಮ ಪರಂಪರೆ, ಆಚಾರ ವಿಚಾರ ಗಳನ್ನು ಅಪಮಾನಿಸುವಂತಹ ವಿಚಾರ ಗಳು ಹುಟ್ಟಿಕೊಂಡವು. ನಮ್ಮಲ್ಲಿ ರಾಷ್ಟ್ರೀಯ ಸಾಹಿತ್ಯ ಹೆಚ್ಚಾಗ ಬೇಕೆಂಬ ನಿಟ್ಟಿನಲ್ಲಿ ಪರಿಷದ್ ಕೆಲಸ ನಿರ್ವಹಿಸುತ್ತಿದೆ. ಇಡೀ ಭಾರತ ದಾದ್ಯಂತ ಭಾರತೀಯ ಸಾಹಿತ್ಯವನ್ನು ಒಟ್ಟುಗೂಡಿಸುವ ಉದ್ದೇಶದಿಂದ ಪರಿಷದ್ ಕಾರ್ಯಕ್ರಮ ಹಮ್ಮಿಕೊಳ್ಳು ತ್ತಿದ್ದು, ಸಂಘಟನೆಯನ್ನು ಬಲಿಷ್ಟ ವಾಗಿ ಬೆಳೆಸಲಾಗುತ್ತಿದೆ ಎಂದರು.
ಪರಿಷದ್‍ನ ಜಿಲ್ಲಾ ಅಧ್ಯಕ್ಷ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ, ರಾಷ್ಟ್ರಭಕ್ತಿ, ರಾಷ್ಟ್ರಚಿಂತನೆಯನ್ನು ಕೊಡಗಿನವರಿಗೆ ಕಲಿಸಬೇಕಿಲ್ಲ. ಡೋಂಗಿ ಜಾತ್ಯತೀತರಿಂದ ನಮ್ಮ ಸಂಸ್ಕøತಿ ಇಂದು ಮರೆಯಾಗುತ್ತಿದೆ. ಆದರೆ ಇಂತಹವರನ್ನು ನಂಬದೇ ಭಾರತೀಯತೆಯನ್ನು ಅರ್ಥೈಸಿ ಕೊಳ್ಳುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದÀರ್ಭ ಸಾಮಾಜಿಕ ಕಾರ್ಯಕರ್ತ ಮೈಸೂರಿನ ಪ್ರದೀಪ್ ಅವರು, ರವಿಕುಮಾರ್ ಅವರ ಇಂಗ್ಲೀಷ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಬಿಚ್ಚುಗತ್ತಿ ಕೃತಿಯನ್ನು ಪ್ರಭಾಕರ್ ಜೋಶಿ ಬಿಡುಗಡೆ ಮಾಡಿದರು.
ಬಿಚ್ಚುಗತ್ತಿ ಕೃತಿಯ ಪರಿಚಯವನ್ನು ಪರಿಷದ್ ನಿರ್ದೇಶಕ ಅಗೇಳಿಕಜೆ ಧನಂಜಯ ಮಾಡಿದರು.
ಈ ಸಂದರ್ಭ ಪರಿಷದ್ ನಿರ್ದೇಶಕರಾದ ಭಾರತಿ ರಮೇಶ್, ಕಡ್ಲೇರ ಆಶಾ ಧರ್ಮಪಾಲ್, ಅನಿತಾ ಪೂವಯ್ಯ, ಪುದಿಯನೆರವನ ರೇವತಿ ರಮೇಶ, ಸವಿತಾ ರಾಕೇಶ್, ಸವಿತಾ ಅರುಣ್, ಪ್ರೇಮಾ ರಾಘವಯ್ಯ, ಅನಿತಾ ಕಾರ್ಯಪ್ಪ, ಆನಂದ ಕಾರ್ಲ ಹಾಗೂ ಇನ್ನಿತರರು ಇದ್ದರು.
ಪ್ರತಿಭಾ ಮಧುಕರ್ ಪ್ರಾರ್ಥಿಸಿ, ಪರಿಷದ್‍ನ ಜಿಲ್ಲಾ ಸಂಚಾಲಕ ಜಯಕುಮಾರ್ ಎಂ.ಕೆ. ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕೋರನ ವಂದಿಸಿದರು.