ಮಡಿಕೇರಿ, ಜ. 20: ನಗರದ ವಿಜಯ ವಿನಾಯಕ ಬಡಾವಣೆಯ ಕಾನ್ವೆಂಟ್ ಜಂಕ್ಷನ್ನಲ್ಲಿ ಮಡಿಕೇರಿ ತಾಲೂಕು ಕಚೇರಿ ಒಳಗೊಂಡಂತೆ ನಿರ್ಮಾಣಕ್ಕೆ ಸಜ್ಜುಗೊಂಡಿದ್ದ ಮಿನಿ ವಿಧಾನಸೌಧ ಕಾಮಗಾರಿ ಮತ್ತೊಮ್ಮೆ ಸ್ಥಗಿತಗೊಳ್ಳುವಂತಾಗಿದೆ. ಪ್ರಸಕ್ತ ಮಣ್ಣಿನ ಗುಣಮಟ್ಟ ಕಟ್ಟಡ ಕಾಮಗಾರಿಗೆ ಸಮರ್ಥವಾಗಿಲ್ಲ ಎಂಬ ಕಾರಣದಿಂದ ಕೆಲಸ ನಿಲ್ಲಿಸಲಾಗಿದೆ.ಕಳೆದ ವರ್ಷ ಏಪ್ರಿಲ್ನಲ್ಲಿ ಅಂದಾಜು ರೂ. 5 ಕೋಟಿ ಯೋಜನೆಯ ಮಿನಿ ವಿಧಾನಸೌಧ ಕಾಮಗಾರಿಯನ್ನು ಕಂದಾಯ ಇಲಾಖೆಯು, ಕರ್ನಾಟಕ ಗೃಹ ನಿರ್ಮಾಣ ಮಂಡಳಿಗೆ ವಹಿಸಿತ್ತು. ಮಂಡಳಿಯು ಟೆಂಡರ್ ಪ್ರಕ್ರಿಯೆ ಮೂಲಕ ಬೆಂಗಳೂರಿನ ಬಾಬುರಾವ್ ಮತ್ತು ಕಂಪೆನಿಗೆ ಕೆಲಸದ ಗುತ್ತಿಗೆ ನೀಡಿತ್ತು. ಆ ಬೆನ್ನಲ್ಲೇ ಗುತ್ತಿಗೆ ಸಂಸ್ಥೆ ಭೂಮಿ ಪೂಜೆಯೊಂದಿಗೆ ನಿವೇಶನವನ್ನು ಸಮತಟ್ಟುಗೊಳಿಸಲು ಕಾರ್ಯೋನ್ಮುಖವಾಗಿತ್ತು.
ಅಷ್ಟರಲ್ಲಿ ಎದುರಾದ ಮಳೆಗಾಲ ದಿಂದ ಕಾಮಗಾರಿ ಸ್ಥಗಿತಗೊಂಡು ಕಳೆದ ಸೆಪ್ಟೆಂಬರ್ನಿಂದ ಈಚೆಗೆ ಮತ್ತೆ ನಿವೇಶನದಲ್ಲಿ ಒಟ್ಟಾರೆ 1.77 ಎಕರೆ ಪ್ರದೇಶವನ್ನು ಸಮತಟ್ಟು ಗೊಳಿಸಿ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ದಿಸೆಯಲ್ಲಿ ಮಣ್ಣಿನ ಗುಣಮಟ್ಟ ಪರೀಕ್ಷೆಯನ್ನು ಮೊದಲಿಗೆ ಸುಳ್ಯದ ಖಾಸಗಿ ತಂತ್ರಜ್ಞರಿಂದ ಮಾಡಿಸಲಾಗಿತ್ತು.
ಆ ಬಳಿಕ ಮತ್ತೆ ಮೈಸೂರಿ ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್.ಐ.ಟಿ) ಮೂಲಕ ಕಟ್ಟಡ ಕಾಮಗಾರಿಗೆ ಈ ಜಾಗದ ಮಣ್ಣು ಸೂಕ್ತವಾಗದು ಎಂಬ ಸಂಶಯದಿಂದ ಸತತ ಮೂರು ಬಾರಿ ಪರೀಕ್ಷಿಸಿದ್ದು, ಸಂಬಂಧಿಸಿದವರು ಈಗಾಗಲೇ ರೂಪಿಸಿರುವ ಯೋಜನೆಯಡಿ ಕಟ್ಟಡ ಅಸಾಧ್ಯವೆಂದು ದೃಢಪಟ್ಟಿದೆ. ಹೀಗಾಗಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಕಾರ್ಯಪಾಲಕ ಅಭಿಯಂತರರು ಗುತ್ತಿಗೆ ಸಂಸ್ಥೆಗೆ ಕೆಲಸ ಮುಂದುವರಿಸದಂತೆ ಮೌಖಿಕವಾಗಿ ತಿಳಿಸಿರುವದಾಗಿ ಗೊತ್ತಾಗಿದೆ.
ಅಲ್ಲದೆ ಪ್ರಸಕ್ತ ಯೋಜನೆಯಂತೆ ಅಂದಾಜು ರೂ. 5 ಕೋಟಿ ವೆಚ್ಚದ ಕಾಮಗಾರಿ
(ಮೊದಲ ಪುಟದಿಂದ) ಅಸಾಧ್ಯವೆಂದೂ, ಮಣ್ಣಿನ ಗುಣಮಟ್ಟ ಸರಿಹೊಂದದಿರುವ ಕಾರಣ, ಕಟ್ಟಡಕ್ಕೆ ಅಡಿಪಾಯ ನಿರ್ಮಿಸಲು ಅಂದಾಜು 12 ಮೀಟರ್ನಷ್ಟು ಭೂಮಿಯೊಳಗೆ ‘ಪೈಲ್ ಫೌಂಡೇಶನ್’ ನಿರ್ಮಿಸುವ ಅಗತ್ಯವಿದೆಯೆಂದೂ, ಈ ಬಾಬ್ತು ಸುಮಾರು ರೂ. 85 ಲಕ್ಷ ಮೊತ್ತ ಅವಶ್ಯಕವೆಂದೂ ನಿರ್ಧರಿಸಲಾಗಿದೆ. ಒಂದು ವೇಳೆ ಕಂದಾಯ ಇಲಾಖೆಯಿಂದ ಮೂಲ ಯೋಜನೆ ಯನ್ನು ಮಾರ್ಪಾಡುಗೊಳಿಸಿದ ನೀಲಿ ನಕಾಶೆಯೊಂದಿಗೆ ಹೆಚ್ಚುವರಿ ಹಣವನ್ನು ಒದಗಿಸಿಕೊಟ್ಟರೆ ಮಾತ್ರ ಈಗಿನ ನಿವೇಶನದಲ್ಲಿ ಮಿನಿ ವಿಧಾನಸೌಧ ಕಟ್ಟಲು ಸಾಧ್ಯವೆಂದು ತಂತ್ರಜ್ಞರ ಅಭಿಪ್ರಾಯವಾಗಿದೆ.
ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಕಾರ್ಯಪಾಲಕ ಅಭಿಯಂತರರು ಕೂಡ ಈ ಕುರಿತು ಈಗಾಗಲೇ ಕಂದಾಯ ಇಲಾಖೆಯ ಮುಖ್ಯಸ್ಥರಿಗೆ ಪತ್ರವನ್ನು ಬರೆದು, ಪ್ರಸಕ್ತ ಎದುರಾಗಿರುವ ತಾಂತ್ರಿಕ ಸಮಸ್ಯೆಯನ್ನು ವಿವರಿಸಿದ್ದು, ಹಣ ಹೆಚ್ಚುವರಿ ಕಲ್ಪಿಸಲು ಸಾಧ್ಯವಾಗದಿದ್ದರೆ ಬದಲಿ ನಿವೇಶನ ಒದಗಿಸಿಕೊಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಸಂಬಂಧಿಸಿದವರಿಂದ ಯಾವದೇ ಉತ್ತರ ಬಾರದಿರುವ ಕಾರಣ, 2018 ನವೆಂಬರ್ ಒಳಗಾಗಿ ಪೂರ್ಣಗೊಳ್ಳಬೇಕಿದ್ದ ರೂ. 5 ಕೋಟಿ ವೆಚ್ಚದ ಮಿನಿ ವಿಧಾನ ಸೌಧ ಕಾಮಗಾರಿ ನಿವೇಶನ ಸಮತಟ್ಟು ಗೊಳಿಸುವ ಹಂತಕ್ಕೆ ಸ್ಥಗಿತಗೊಂಡಿದೆ.