ಶನಿವಾರಸಂತೆ, ಜ. 20: ಕೂರ್ಲಳ್ಳಿ ಗ್ರಾಮದ ರೈತ ಗೌಡಳ್ಳಿ ಸಹಕಾರ ಬ್ಯಾಂಕ್‍ನಲ್ಲಿ ಮನೆ ಕಟ್ಟಲು ತೆಗೆದುಕೊಂಡಿದ್ದ ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತಾ. 18ರಂದು ನಡೆದಿದೆ.

ಕೆ.ಎ ಬಸವರಾಜ್ ಮೃತಪಟ್ಟ ರೈತ, ಜೀವನದಲ್ಲಿ ಬೇಸತ್ತು ತಾ. 13ರಂದು ವಿಷ ಸೇವಿಸಿದ್ದು, ಮಗನಿಂದ ವಿಷಯ ತಿಳಿದ ಪಕ್ಕದ ಮನೆಯವರು ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆಗೆ ಸ್ಪಂದಿಸದ ಬಸವರಾಜ್ ಅವರು ತಾ. 18ರಂದು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ರಾತ್ರಿ ಮಾರ್ಗಮಧ್ಯೆ ಬಂಟ್ವಾಳದ ಬಳಿ ಮೃತಪಟ್ಟಿದ್ದಾರೆ. ಮೃತದೇಹವನ್ನು ವಾಪಾಸು ತಂದು ಮಡಿಕೇರಿಯ ಶವಗಾರದಲ್ಲಿ ಇಡಲಾಗಿತ್ತು. ಮೃತ ಬಸವರಾಜ್ ಅವರ ತಂದೆ ಕೆ.ಬಿ. ಅಣ್ಣಯ್ಯ ತಾ. 19ರಂದು ನೀಡಿದ ದೂರಿನ ಅನ್ವಯ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.