ಮಡಿಕೇರಿ, ಜ.19: ತಾ. 20 ರಿಂದ (ಇಂದಿನಿಂದ) ಶಿರಾಡಿಘಾಟ್ ರಸ್ತೆ ಸರಿಪಡಿಸುವ ಕಾರ್ಯ ನಡೆಯುವ ಹಿನ್ನೆಲೆ, ಈ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್ ಆಗಲಿದ್ದು, ಸಂಪಾಜೆ, ಮಡಿಕೇರಿ ಮತ್ತು ಕುಶಾಲನಗರ ಮಾರ್ಗದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಲಿದೆ. ಸಂಪಾಜೆ- ಕುಶಾಲನಗರ ಮಾರ್ಗ ರಾತ್ರಿ 9 ರಿಂದ ಬೆಳಗಿನ 6 ಗಂಟೆ ವರೆಗೆ ಭಾರೀ ವಾಹನ ಸಂಚಾರಕ್ಕೆ ಅವಕಾಶ ನೀಡಲು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಅಧ್ಯಕ್ಷತೆ ಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕೊಡಗು ಬೆಟ್ಟ-ಗುಡ್ಡ ಪ್ರದೇಶವಾಗಿದ್ದು ಕಿರಿದಾದ ರಸ್ತೆ ಹೊಂದಿದೆ. ಆ ನಿಟ್ಟಿನಲ್ಲಿ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದರು.
ಸಂಪಾಜೆ, ಮಡಿಕೇರಿ ಮತ್ತು ಕುಶಾಲನಗರ ಮಾರ್ಗದಲ್ಲಿ ಅಗತ್ಯವಿರುವೆಡೆ ನಾಮಫಲಕ ಅಳವಡಿಸಬೇಕು. ಪೊಲೀಸ್ ಹಾಗೂ ಹೆದ್ದಾರಿ ವಿಭಾಗದ ಇಂಜಿನಿಯರ್ ಗಳು ಸಂಪಾಜೆ-ಕುಶಾಲನಗರ ಮಾರ್ಗದವರೆಗೆ
(ಮೊದಲ ಪುಟದಿಂದ) ಜಂಟಿ ಸಮೀಕ್ಷೆ ಮಾಡಿ ತಿರುವುಗಳು ಹಾಗೂ ಅಗತ್ಯ ಇರುವ ಕಡೆ ನಾಮಫಲಕಗಳನ್ನು ಅಳವಡಿಸು ವಂತೆ ಅವರು ಸೂಚನೆ ನೀಡಿದರು. ಹೆದ್ದಾರಿ ವಿಭಾಗದ ಕಚೇರಿಗಳು ಮಂಗಳೂರು ಮತ್ತು ಮೈಸೂರಿನಲ್ಲಿ ಇರುವದರಿಂದ, ಇಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಮಡಿಕೇರಿ ಕೇಂದ್ರದಲ್ಲಿ ಹೆದ್ದಾರಿ ವಿಭಾಗದಿಂದ ಒಬ್ಬ ಎಂಜಿನಿಯರ್, ಒಬ್ಬ ಏಜೆನ್ಸಿಯನ್ನು ನಿಯೋಜಿಸು ವಂತೆ ಹೆದ್ದಾರಿ ಇಲಾಖೆ ಇಂಜಿನಿಯರ್‍ಗೆ ನಿರ್ದೇಶನ ನೀಡಿದರು.
ಭಾರೀ ವಾಹನಗಳು (ಬಿ ಕ್ಯಾಟಗರಿ ವಾಹನ) ಯಾವ ಸಮಯದಲ್ಲಿ ಸಂಚಾರ ಮಾಡಬೇಕು, ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸುವದು ಮತ್ತಿತರ ಬಗ್ಗೆ ಸಂಪಾಜೆ, ಮಡಿಕೇರಿ ಹಾಗೂ ಕುಶಾಲನಗರದಲ್ಲಿ ದೊಡ್ಡ ನಾಮಫಲಕ ಅಳವಡಿಸುವಂತೆ ಸೂಚನೆ ನೀಡಿದರು.
ವಾಹನ ಸಂಚಾರ ನಿಷೇಧ ಸಂಬಂಧ ಜಿಲ್ಲಾಡಳಿತ ಹೊರಡಿಸುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಜಿಲ್ಲೆಯಲ್ಲಿ ಯಾವದೇ ರೀತಿಯ ಅಪಘಾತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೆಕು. ಆ ನಿಟ್ಟಿನಲಿ ಸರ್ಕಾರದ ನಿಯಮ ಪಾಲಿಸಬೇಕು ಸೂಚನೆ ನೀಡಿದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜು ಮಾತನಾಡಿ ಕಳೆದ ಬಾರಿ ಮದೆನಾಡು ಬಳಿ ಎರಡು ಅಪಘಾತಗಳು ಸಂಭವಿಸಿವೆ. ಅಪಘಾತ ಆಗದಂತೆ ಗಮನಹರಿಸುವದು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಮಂಗಳೂರು ಹೆದ್ದಾರಿ ವಿಭಾಗದ ಇಂಜಿನಿಯರ್ ಮಾತನಾಡಿ, ಬಿಎಂ ರಸ್ತೆಯಲ್ಲಿ ದಿನದ 24 ಗಂಟೆಯಲ್ಲಿ 1 ಸಾವಿರ ಬಸ್‍ಗಳು ಮತ್ತು 1 ಸಾವಿರ ಭಾರೀ ವಾಹನಗಳು ಸಂಚರಿಸಲಿವೆ. ಶಿರಾಡಿಘಾಟ್ ರಸ್ತೆ ವಾಹನ ಸಂಚಾರ ಸ್ಥಗಿತಗೊಳ್ಳುವದರಿಂದ ಈ ಮಾರ್ಗದಲ್ಲಿ ಭಾರೀ ವಾಹನಗಳು ಓಡಾಡಲಿವೆ. ಅದಕ್ಕಾಗಿ ಸುಗಮ ರಸ್ತೆ, ಅಗತ್ಯ ಇರುವ ಕಡೆ ನಾಮಫಲಕ ಅಳವಡಿಸುವದು ಮತ್ತಿತರ ಸಂಬಂಧ ಗಮನಹರಿಸಲಾಗುವದು ಎಂದು ಮಾಹಿತಿ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ ಅವರು ಸುಗಮ ವಾಹನ ಸಂಚಾರ ಸಂಬಂಧ ವಿಶೇಷ ತನಿಖಾ ದಳ ರಚನೆ ಮಾಡಲಾಗಿದ್ದು, 8 ಇನ್ಸ್‍ಪೆಕ್ಟರ್‍ಗಳನ್ನು ನಿಯೋಜಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಕುಶಾಲನಗರ ಡಿವೈಎಸ್‍ಪಿ ಪುರುಷೋತ್ತಮ್ ಅವರು ಕುಶಾಲನಗರದಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಗುಡ್ಡೆಹೊಸೂರು ಹಾರಂಗಿ ಮಾರ್ಗದ ಮೂಲಕ ಸಂಚಾರ ಮಾರ್ಗಕ್ಕೆ ಅವಕಾಶ ಕಲ್ಪಿಸಬಹುದು ಎಂದು ಸಲಹೆ ಮಾಡಿದರು. ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ಪ್ರಭು ಅವರು ಹೆದ್ದಾರಿ ರಸ್ತೆ ದುರಸ್ತಿ ಸಂಬಂಧ ಹಲವು ಮಾಹಿತಿ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಭಾಗ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪುಟ್ಟಸ್ವಾಮಿ, ಪೌರಯುಕೆÀ್ತ ಬಿ.ಶುಭಾ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಪ್ರಾದೇಶಿಕ ಸಾರಿಗೆ ಕಚೇರಿಯ ರೀಟಾ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಇಂಜಿನಿಯರ್ ಇತರರು ಇದ್ದರು.