ಒಡೆಯನಪುರ, ಜ. 20 : ಹುಲುಕೋಡು ಗ್ರಾಮದ ಶ್ರೀ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆ ಸಂಭ್ರ್ರಮ, ಸಡಗರದಿಂದ ನೆರವೇರಿತು. ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆಯುವ ಶ್ರೀ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆಯನ್ನು ಹುಲುಕೋಡು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ, ಹುಲುಕೊಡು ಗ್ರಾಮದ ಹೆಬ್ಬಾಗಿಲಿನ ಒಳಗಡೆ ನಿರ್ಮಿಸಿರುವ ಶ್ರೀ ಕುಮಾರಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ಸಂಕಾಂ್ರತಿ ಹಬ್ಬದ 2ನೇ ದಿನ ವಿಶೇಷ ವಾರ್ಷಿಕ ಪೂಜೆಯೊಂದಿಗೆ ನೆರವೇರಿಸಲಾಯಿತು.

ಹುಲುಕೋಡು ಶ್ರೀ ಕುಮಾರಲಿಂಗೇಶ್ವರಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುವ ಕುದುರೆ ಮೇಲೆ ಸವಾರಿ ಮಾಡುತ್ತಿರುವ ಶ್ರೀ ಕುಮಾರಲಿಂಗೇಶ್ವರಸ್ವಾಮಿ ವಿಗ್ರಹಕ್ಕೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು, ಬಳಿಕ ಭಕ್ತಾದಿಗಳಿಗೆ ಮತ್ತು ಗ್ರಾಮಸ್ಥರಿಗೆ ದೇವಾಲಯದೊಳಗೆ ಪೂಜೆಯನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. ಮಧ್ಯಾಹ್ನ 12.30 ಗಂಟೆಗೆ ದೇವರನ್ನು ಅಡ್ಡಪಲ್ಲಕ್ಕಿ ಮೇಲೆ ಕುಳ್ಳಿರಿಸಿ ಗ್ರಾಮದ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಅಡ್ಡಪಲ್ಲಕ್ಕಿ ಮೇಲಿದ್ದ ದೇವರಿಗೆ ಹೂವಿನಹಾರ ಹಾಕಿ ಪೂಜೆ ಸಲ್ಲಿಸಿದರು. ಬಳಿಕ ಕುಮಾರಲಿಂಗೇಶ್ವರಸ್ವಾಮಿ ದೇವರನ್ನು ಅಡ್ಡಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಗ್ರಾಮಸ್ಥರು ಮತ್ತು ಭಕ್ತಾದಿಗಳು ಮೆರವಣಿಗೆಯಲ್ಲಿ ಸಾಗಿದರು. ಮಧ್ಯಾಹ್ನ 2 ಗಂಟೆಗೆ ಹುಲುಕೊಡು ಮತ್ತು ಅವರೆದಾಳು ಗ್ರಾಮದಲ್ಲಿರುವ ಜಾತ್ರ ಮೈದಾನದಲ್ಲಿರುವ ಗುಡಿಯಲ್ಲಿ ವಿಗ್ರಹವನ್ನು ಭಕ್ತಾದಿಗಳ ದರ್ಶನಕ್ಕಿಡಲಾಯಿತು. ಈ ಪ್ರಯುಕ್ತ ಮೈದಾನದಲ್ಲಿ ಸಂಜೆ 5 ಗಂಟೆಯ ತನಕ ಜಾತ್ರೆಯನ್ನು ನಡೆಸಲಾಯಿತು. ಸಂಜೆ 5 ಗಂಟೆಗೆ ಕುಮಾರಲಿಂಗೇಶ್ವರಸ್ವಾಮಿ ದೇವರನ್ನು ಜಾತ್ರಾ ಮೈದಾನದಿಂದ ಹುಲುಕೋಡು ಗ್ರಾಮದ ದೇವಾಲಯಕ್ಕೆ ಮರಳಿ ಕೊಂಡೊಯ್ಯಲಾಯಿತು.

ಸಂಜೆ ನಡೆದ ಸಮಾರಂಭದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಂಚಾಲಕ ಮೇರಿಯಂಡ ಸಂಕೇತ್ ಪೂವಯ್ಯ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಜಾನಪದ ಉತ್ಸವಗಳನ್ನು ನಡೆಸುವದರ ಮೂಲಕ ನಮ್ಮ ದೇಶದ ಸಂಸ್ಕøತಿ ವಿಶಿಷ್ಟ್ಠತೆಯನ್ನು ವಿಶ್ವಕ್ಕೆ ಕಲಿಸಿಕೊಡು ವಂತಾಗಬೇಕೆಂದರು.

ಜಾತ್ರಾ ಸಮಿತಿ ಅಧ್ಯಕ್ಷ ಪಾಪಣ್ಣ ಮಾತನಾಡಿ-ಜಾನಪದ ಹಿನ್ನಲೆಯುಳ್ಳ ಹುಲುಕೋಡು ಕುಮಾರಲಿಂಗೇಶ್ವರ ಜಾತ್ರೆಯನ್ನು ಅನೇಕ ವರ್ಷಗಳಿಂದ ಸಾಂಪ್ರದಾಯಕವಾಗಿ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ, ಜೆಡಿಎಸ್ ಜಿಲ್ಲಾ ವಕ್ತಾರ ಎಂ.ಎ. ಆದಿಲ್‍ಪಾಷ, ಪ್ರಮುಖರಾದ ಮುತ್ತೇಗೌಡ, ಶಶಿ, ಹುಲುಕೊಡು ದೇವಪ್ಪ, ಮಾದ್ರೆ ದೇವಪ್ಪ ಮುಂತಾದವರು ಇದ್ದರು.

- ವಿ.ಸಿ.ಸುರೇಶ್