ಸೋಮವಾರಪೇಟೆ,ಜ.21: ತಾಲೂಕಿನ ಕೂತಿ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಯಿತು.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಟಾಕಿ ಸಿಡಿಸಿ, ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯ ನಡೆಸಿದರು. ಕೆಲ ಆನೆಗಳನ್ನು ಸಕಲೇಶಪುರ ತಾಲೂಕಿನ ಬಿಸಲೆ ಹಾಗು ಮಾಗೇರಿ ಅರಣ್ಯದ ಕಡೆಗೆ ಓಡಿಸಲಾಯಿತು. ಉಳಿದವು ಗ್ರಾಮದ ಪಕ್ಕದ ಅರಣ್ಯದಲ್ಲಿಯೇ ಸೇರಿಕೊಂಡಿದ್ದು, ಅವುಗಳನ್ನು ಕಾಡಿಗಟ್ಟಲಾಗುವದು ಎಂದು ಅರಣ್ಯ ಸಿಬ್ಬಂದಿಗಳು ತಿಳಿಸಿದರು.

ಸುಮಾರು 8 ರಿಂದ 10 ಆನೆಗಳನ್ನು ಹೊಂದಿರುವ ಹಿಂಡು ಕೂತಿ, ನಗರಳ್ಳಿ, ಕುಂದಳ್ಳಿ, ಬಾಣಗೇರಿ, ಮಾಗೇರಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಕಾಫಿ, ಬಾಳೆ, ಸೇರಿದಂತೆ ತರಕಾರಿ ಬೆಳೆಗಳನ್ನು ನಷ್ಟಪಡಿಸಿದ ಹಿನ್ನೆಲೆಯಲ್ಲಿ ಕಾಡಾನೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಅರಣ್ಯ ಇಲಾಖೆಯ ಕಚೇರಿಗೆ ಬೀಗ ಜಡಿಯಲಾಗುವದು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಎಚ್ಚರಿಸಿದ್ದರು.