ಮಡಿಕೇರಿ, ಜ. 21: ಆತ್ಮವಿಶ್ವಾಸದ ಜೊತೆಗೆ ನಿರಂತರ ಪರಿಶ್ರಮವಿದ್ದಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನಗರದ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಬುದ್ಧ ನೌಕರರ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಿದ್ಧತೆ ಬಗ್ಗೆ ವಿದ್ಯಾರ್ಥಿಗಳಿಗೆ ನಡೆದ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾಗರಿಕ ಸೇವಾ ಪರೀಕ್ಷೆಗಳ ಕುರಿತು ಹೆಚ್ಚಿನ ಅಭ್ಯರ್ಥಿಗಳು ಆಸಕ್ತಿ ಹೊಂದಿರುತ್ತಾರೆ. ಆದರೆ ಹೆಚ್ಚಿನವರಿಗೆ ಪರೀಕ್ಷೆ ಬರೆಯುವ ವಿಧಾನಗಳ ಬಗ್ಗೆ ಗೊಂದಲಗಳಿರುತ್ತದೆ. ಆದರೆ ಇಂದು ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯುವವರಿಗೆ ಹೆಚ್ಚಿನ ಅವಕಾಶಗಳಿದ್ದು, ವಿವಿಧ ಕೊರ್ಸ್‍ಗಳು ಕೂಡ ಲಭ್ಯವಿದೆ. ಆದರೆ ಇದೆಲ್ಲದಕ್ಕಿಂತ ಮಿಗಿಲಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸವಿರಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ ರಾಜೇಂದ್ರ ಪ್ರಸಾದ್ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ಮಹತ್ವದ್ದನ್ನು ಸಾಧಿಸುವ ಕನಸಿರುತ್ತದೆ. ಆದರೆ ಹೆಚ್ಚಿನ ಜನ ಇದು ತಮ್ಮಿಂದ ಸಾಧ್ಯವಿಲ್ಲ ಎಂಬ ನಕಾರಾತ್ಮಕ

(ಮೊದಲ ಪುಟದಿಂದ) ಭಾವನೆಯನ್ನು ಹೊಂದಿರುತ್ತಾರೆ. ಆದರೆ ವಿದ್ಯಾರ್ಥಿಗಳು ಇಂತಹ ನಕಾರಾತ್ಮಕ ಭಾವನೆಯನ್ನು ತೊಡೆದುಹಾಕಿ ಸಕಾರಾತ್ಮಕ ಭಾವನೆಯನ್ನು ಬೆಳೆಸಿಕೊಂಡು ಸ್ವಯಂಪ್ರೇರಣೆಯಿಂದ ಓದಿನಲ್ಲಿ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಪರೀಕ್ಷೆ ಬರೆಯಲು ತರಬೇತಿ ಅನಿವಾರ್ಯವಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಂದು ಅಂತರ್ಜಾಲದಲ್ಲೂ ಹೆಚ್ಚಿನ ಮಾಹಿತಿ ಲಭ್ಯ. ಇಂತಹ ಅವಕಾಶವನ್ನು ವಿದ್ಯಾರ್ಥಿಗಳು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಯುವಜನತೆ ಸಾಮಾಜಿಕ ಜಾಲತಾಣಗಳ ಮೊರೆಹೋಗುತ್ತಿದ್ದು, ಮಾಹಿತಿ ವಿನಿಮಯ, ಓದು ಕಡಿಮೆಯಾಗುತ್ತಿದೆ. ಮೊಬೈಲ್ ಎಂಬ ಸಾಧನದಿಂದ ಓದಿನಲ್ಲಿ ಸಂಪೂರ್ಣ ಮುಳುಗಿದ್ದು, ಸಂವಹನ ಪ್ರಕ್ರಿಯೆ ಕಡಿಮೆಯಾಗಿದೆ ಎಂದು ವಿಷಾಧಿಸಿದ ಅವರು, ನಿರಂತರ ಓದಿನಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.

ಇದೇ ಸಂದರ್ಭ ನಾಗರಿಕ ಸೇವಾ ಪರೀಕ್ಷೆಗಳ ಕುರಿತು ಜಿಲ್ಲಾಧಿಕಾರಿ ಪಿ ಶ್ರೀ ವಿದ್ಯಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಸಮಗ್ರ ಮಾಹಿತಿ ನೀಡಿ, ಪರೀಕ್ಷೆಯ ವಿವಿಧ ಆಯಾಮಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಹೆಚ್. ವಿ ದೇವದಾಸ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ವಿಭಾಗೀಯ ಸಂಚಾಲಕ ಎನ್ ವೀರಭದ್ರಯ್ಯ ಜಿಲ್ಲಾ ಸಂಯೋಜಕ ಹೆಚ್.ಎನ್. ದಿವಾಕರ್ ಮತ್ತಿತರರು ಹಾಜರಿದ್ದರು.