(ವಿಜಯ್ ಹಾನಗಲ್) ಸೋಮವಾರಪೇಟೆ, ಜ.21 : ಜಾತ್ಯತೀತ ಜನತಾದಳ ಪಕ್ಷವನ್ನು ತೊರೆದು ಬಿಜೆಪಿ ಸೇರಿರುವ ವಿ.ಎಂ. ವಿಜಯ ಮತ್ತು ಎಸ್.ಬಿ. ಭರತ್‍ಕುಮಾರ್ (ಶುಂಠಿ ಭರತ್) ಅವರುಗಳನ್ನು ಪಕ್ಷಕ್ಕೆ ಸೇರ್ಪಡೆಗೊಳಿಸದಂತೆ ಈ ಹಿಂದೆ ಕೆಲವರು ಕೈಗೊಳ್ಳಲಾಗಿದ್ದ ನಿರ್ಣಯಕ್ಕೆ ಜಿಲ್ಲಾ ಬಿಜೆಪಿ ಸಭೆಯಲ್ಲಿ ಮನ್ನಣೆ ದೊರಕದ ಹಿನ್ನೆಲೆ, ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಕೆಲ ಮುಖಂಡರಿಗೆ ತೀವ್ರ ಹಿನ್ನಡೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ಮಧ್ಯೆ ಇವರೀರ್ವರ ಪಕ್ಷ ಸೇರ್ಪಡೆಯನ್ನು ವಿರೋಧಿಸಿ, ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಕಾರ್ಯವೈಖರಿಯನ್ನು ಮೆಚ್ಚದ ಕೆಲ ನಾಯಕರು ಸಂಘ ಪರಿವಾರದ ಹೆಸರಿನಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು, ಟಿಕೆಟ್ ನೀಡದಂತೆ ರಾಜ್ಯ ಮುಖಂಡರಿಗೆ ಪತ್ರ ಬರೆದಿರುವ ಹಿನ್ನೆಲೆ ಮುಂದಿನ 10 ರಿಂದ 15 ದಿನಗಳ ಒಳಗೆ ಮಾಜೀ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಕೊಡಗಿಗೆ ಆಗಮಿಸಿ ಮುಖಂಡರೊಂದಿಗೆ ಚರ್ಚಿಸುವ ನಿರೀಕ್ಷೆಯಿದೆ.
ಇಲ್ಲಿನ ಮಹಿಳಾ ಸಮಾಜದಲ್ಲಿ ಸಭೆ ಸೇರಿದ್ದ ಅತೃಪ್ತ ಬಣದ ಮುಖಂಡರು, ವಿ.ಎಂ. ವಿಜಯ ಮತ್ತು ಭರತ್‍ಕುಮಾರ್ ಅವರುಗಳ ‘ಎಸ್.ಬಿ. ಭರತ್ ಮತ್ತು ವಿ.ಎಂ. ವಿಜಯ ಅವರುಗಳು ಬೇರೆ ಪಕ್ಷದಲ್ಲಿದ್ದಾಗ ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿರುವ ಬಗ್ಗೆ ಕಾರ್ಯಕರ್ತರು ಅಳಲು ತೋಡಿಕೊಂಡ ಹಿನ್ನೆಲೆ ಅವರೀರ್ವರ ಪಕ್ಷ ಸೇರ್ಪಡೆಯನ್ನು ವಿರೋಧಿಸಿದ್ದೇವೆ. ಮಹಿಳಾ ಸಮಾಜದಲ್ಲಿ ಈ ಒಂದೇ ಒಂದು ವಿಷಯದ ಅಜೆಂಡಾ ಇಟ್ಟುಕೊಂಡು ಸಭೆ ನಡೆಸಲಾಗಿತ್ತು. ಈ ಮಧ್ಯೆ ಚುನಾವಣೆಯಲ್ಲಿ ಅಭ್ಯರ್ಥಿ ಬದಲಾವಣೆಯ ಬಗ್ಗೆ ಕೆಲವರು ಅಭಿಪ್ರಾಯ ನೀಡಿದ್ದು, ಅದನ್ನು ನಿರ್ಣಯ ಮಾಡಲಾಗಿದೆ. ಶಾಸಕರ ಬಗ್ಗೆ ತನ್ನ ವೈಯುಕ್ತಿಕ ವಿರೋಧ ಇಲ್ಲ. ಸಭೆಯ ತೀರ್ಮಾನವನ್ನು ದಾಖಲಿಸಿದ್ದೇವೆ. ಅವರಿಗೆ ಟಿಕೆಟ್ ಸಿಕ್ಕಿದರೂ ಕೆಲಸ ಮಾಡುತ್ತೇವೆ. ಪಕ್ಷದ ತೀರ್ಮಾನವೇ ಅಂತಿಮ. ಅನ್ಯ ಪಕ್ಷಗಳಿಂದ ಆಹ್ವಾನ ಬಂದರೂ ಹಿಂದುತ್ವದ ತಳಹದಿ ಹೊಂದಿರುವ ಮಾತೃಪಕ್ಷವನ್ನು ಬಿಡುವ ಪ್ರಶ್ನೆ ಇಲ್ಲ. ಬಿಜೆಪಿಯಲ್ಲೇ ಇದ್ದೇವೆ..,ಇರ್ತೀವಿ. ರಾಜೀನಾಮೆ ಬಗ್ಗೆ ತೀರ್ಮಾನ ಮಾಡಿಲ್ಲ’
- ಶುಂಠಿ ಸುರೇಶ್, ಬಿಜೆಪಿ ಕ್ಷೇತ್ರ ಸಮಿತಿ ಕಾರ್ಯಾಧ್ಯಕ್ಷ
‘ನಮ್ಮ ಬೇಡಿಕೆಗಳ ಬಗ್ಗೆ ಡಿ.ವಿ. ಸದಾನಂದಗೌಡ ಅವರ ಗಮನ ಸೆಳೆದಿದ್ದೇವೆ. 10 ದಿನದಲ್ಲಿ ಸಭೆ ಕರೆಯುವ ಭರವಸೆ ನೀಡಿದ್ದಾರೆ. ಪಕ್ಷಕ್ಕೆ ಯಾರು ಬೇಕಾದರೂ ಬರಲಿ;ಹೋಗಲಿ. ಈಗ ಬಂದಿರುವ ವಿಜಯ ಮತ್ತು ಭರತ್ ಅವರುಗಳಿಗೆ ತಕ್ಷಣಕ್ಕೆ ಜವಾಬ್ದಾರಿ ಕೊಡುವ ಬಗ್ಗೆ ನಮ್ಮ ವಿರೋಧ ಇದೆ. ಅವರುಗಳೂ ಪಕ್ಷಕ್ಕಾಗಿ 1 ವರ್ಷ ಕೆಲಸ ಮಾಡಲಿ. ನಮ್ಮ ನಿರ್ಣಯದ ಬಗ್ಗೆ ಚರ್ಚೆ ನಡೆಸಿ ಜಿಲ್ಲಾ ಸಮಿತಿ ತೀರ್ಮಾನ ಕೊಟ್ಟಿದೆ. ಯಾರು ಬಂದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಅವರ ನಿರ್ಧಾರಕ್ಕೆ ಬದ್ದ. ಒಂದು ವೇಳೆ ಜೆಡಿಎಸ್ ಮುಖಂಡ ಜೀವಿಜಯ ಅವರು ಬಂದರೂ ಸ್ವಾಗತಿಸುತ್ತೇವೆ. ರಾಜಕೀಯ ನಿಂತ ನೀರಲ್ಲ’
-ಎಸ್.ಪಿ. ಪೊನ್ನಪ್ಪ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ,ಬಿಜೆಪಿ ಮುಖಂಡ
‘ಭರತ್ ಮತ್ತು ವಿ.ಎಂ. ವಿಜಯ ಅವರುಗಳ ಆಗಮನದ ಬಗ್ಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಸಭೆಯಲ್ಲೂ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದ್ದರಿಂದ ಸೋಮವಾರಪೇಟೆಯಲ್ಲಿ ನಡೆದ ಯುವ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿಲ್ಲ’
- ಮಹೇಶ್ ತಿಮ್ಮಯ್ಯ, ಯುವ ಮೋರ್ಚಾ ತಾಲೂಕು ಅಧ್ಯಕ್ಷ
‘ಸದ್ಯದ ಮಟ್ಟಿಗೆ ಯಾವ ತೀರ್ಮಾನವೂ ಆಗಿಲ್ಲ. ಮಹಿಳಾ ಸಮಾಜದ ಸಭೆಯಲ್ಲಿ ತಾನು 5 ನಿಮಿಷ ಮಾತ್ರ ಇದ್ದೆ. ಜೆಡಿಎಸ್ ನಾಯಕರ ಆಗಮನ ಬಗ್ಗೆ ಸಭೆಯಲ್ಲಿ ಸಾಂಕೇತಿಕ ಪ್ರತಿರೋಧ ವ್ಯಕ್ತವಾಗಿದೆ. ಅಭ್ಯರ್ಥಿ ಬದಲಾವಣೆ ಬಗ್ಗೆ ಒಂದಿಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಷ್ಟ್ರೀಯ ನೀತಿಯನ್ವಯ ಜೆಡಿಎಸ್‍ನವರನ್ನು ಬಿಜೆಪಿಗೆ ಕರೆತಂದಿದ್ದಾರೆ. ಪಕ್ಷದ ತೀರ್ಮಾನಕ್ಕೆ ಯಾವಾಗಲೂ ಬದ್ಧ. ಅದಕ್ಕೆ ವಿರುದ್ಧವಾಗಿ ಕೆಲಸ ಮಾಡೋಕೆ ಆಗಲ್ಲ. ಸ್ಥಾನಗಳಿಗೆ ರಾಜೀನಾಮೆ ನೀಡುವ ಬಗ್ಗೆ ಚರ್ಚೆಯಾಗಿತ್ತು ಅಷ್ಟೇ. ಅಂತಿಮ ತೀರ್ಮಾನ ಆಗಿಲ್ಲ’
-ಬಿ.ಜೆ. ದೀಪಕ್, ಜಿ.ಪಂ. ಸದಸ್ಯ, ಹಾನಗಲ್ಲು ಕ್ಷೇತ್ರ.
‘ಜೆಡಿಎಸ್‍ನಲ್ಲಿ ಸ್ಥಾನ ಇಲ್ಲದಿದ್ದಾಗ ಬಿಜೆಪಿಗೆ ಬಂದಿದ್ದಾರೆ. ಇದಕ್ಕೆ ಹಲವು ಕಾರ್ಯಕರ್ತರ ವಿರೋಧವಿದೆ. ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ. ಅಭ್ಯರ್ಥಿ ಬದಲಾವಣೆ ಬಗ್ಗೆ ನನ್ನ ಅಭಿಪ್ರಾಯ ಏನೂ ಇಲ್ಲ. ಹಲವಷ್ಟು ಕಾರ್ಯಕರ್ತರು ಮತ್ತು ಮುಖಂಡರು ಬದಲಾವಣೆಯ ಪರವಾಗಿದ್ದಾರೆ. ಇವರುಗಳಿಗೆ ನನ್ನ ಬೆಂಬಲ ಇದೆ. ನಾನು ತಾ.ಪಂ. ಅಧ್ಯಕ್ಷರಾಗುವ ಅವಕಾಶ ತಪ್ಪಿಸಿದ್ದಾರೆ. ಜಿ.ಪಂ. ಚುನಾವಣೆ ಸಂದರ್ಭ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದ್ದಾರೆ. ಬೇರೆಯವರು ಏನಾದರೂ ಹೇಳಬಹುದು. ಅಭ್ಯರ್ಥಿ ಬದಲಾವಣೆ ವಿಷಯದಲ್ಲಿ ನನ್ನ ಬೆಂಬಲ ಇದೆ. ಪಕ್ಷದ ಪದಾಧಿಕಾರಿ ಹುದ್ದೆಗಳಿಗೆ ರಾಜೀನಾಮೆ ನೀಡುವ ಬಗ್ಗೆ ಚರ್ಚೆಯಾಗಿದೆಯೇ ಹೊರತು ಚುನಾಯಿತ ಸ್ಥಾನಗಳಿಗೆ ರಾಜೀನಾಮೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ’
-ಪೂರ್ಣಿಮಾ ಗೋಪಾಲ್, ಜಿ.ಪಂ. ಸದಸ್ಯೆ, ಅಬ್ಬೂರುಕಟ್ಟೆ ಕ್ಷೇತ್ರ
‘ಎಲ್ಲಾ ಗೊಂದಲಗಳಿಗೆ ಮುಂದಿನ 15 ದಿನದಲ್ಲಿ ತೆರೆ ಬೀಳಲಿದೆ. ಡಿ.ವಿ. ಸದಾನಂದ ಗೌಡ ಅವರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹಿರಿಯರನ್ನು ಪರಿಗಣನೆಗೆ ತೆಗೆದುಕೊಂಡು ಹೊಸಬರನ್ನೂ ಸೇರಿಸಿಕೊಂಡು ಪಕ್ಷವನ್ನು ಬಲಿಷ್ಠಗೊಳಿಸಬೇಕಿದೆ. ಈಗಿನ ಎಲ್ಲಾ ಬೆಳವಣಿಗೆ ಬಗ್ಗೆ ಪಕ್ಷದ ರಾಜ್ಯ ಮುಖಂಡರ ಗಮನಕ್ಕೆ ತಂದಿದ್ದೇನೆ. ಪರಿವರ್ತನೆ ಯಾತ್ರೆಯ ಸಮಯಕ್ಕೆ ಎಲ್ಲವೂ ಸರಿಯಾಗಲಿದೆ. ಪಕ್ಷ ಕಟ್ಟುವಲ್ಲಿ ಎಲ್ಲರ ಶ್ರಮ ಇದೆ. ಬಿಜೆಪಿಯಲ್ಲಿ ಪ್ರತಿಯೋರ್ವ ಕಾರ್ಯಕರ್ತನೂ ನಾಯಕನೇ ಆಗಿದ್ದಾನೆ. ರಾಜ್ಯದಲ್ಲಿ ಈವರೆಗೆ ಅಭ್ಯರ್ಥಿಗಳ ಘೋಷಣೆಯಾಗಿಲ್ಲ, ನಾನೇ ಅಭ್ಯರ್ಥಿ, ನನಗೆ ಟಿಕೇಟ್ ಖಾತ್ರಿಯಾಗಿದೆ ಎಂದು ಯಾರಾದರೂ ಹೇಳಿಕೊಂಡರೆ ಅವರ ವಿರುದ್ಧ ದೂರು ನೀಡುವಂತೆ ರಾಷ್ಟ್ರಾಧ್ಯಕ್ಷರೇ ಸೂಚಿಸಿದ್ದಾರೆ. ಎಲ್ಲರೂ ಕಾರ್ಯಕರ್ತರಂತೆ ಪಕ್ಷ ಸಂಘಟಿಸಬೇಕು’
-ಬಿ.ಬಿ. ಭಾರತೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ
‘ಸೋಮವಾರಪೇಟೆಯಲ್ಲಿ ಪಕ್ಷದ ಮುಖಂಡರಾದ ಡಿ.ವಿ. ಸದಾನಂದಗೌಡ ಅವರು ಎಲ್ಲರೊಂದಿಗೂ ಮಾತುಕತೆ ನಡೆಸಿದ್ದಾರೆ. ಅಭಿಪ್ರಾಯ ಭೇದಗಳ ಬಗ್ಗೆ ಚರ್ಚೆಯಾಗಿದ್ದು, ಗೊಂದಲ ಬಗೆಹರಿದಿದೆ. ಪಕ್ಷ ಸಂಘಟನೆಯತ್ತ ಎಲ್ಲರೂ ತೊಡಗಿಸಿಕೊಳ್ಳುವ ಬಗ್ಗೆ ತೀರ್ಮಾನವಾಗಿದೆ. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವದಷ್ಟೇ ಸದ್ಯದ ಗುರಿ’
- ಅಪ್ಪಚ್ಚು ರಂಜನ್, ಮಡಿಕೇರಿ ಕ್ಷೇತ್ರದ ಶಾಸಕ