ಮಡಿಕೇರಿ, ಜ. 21: ಪ್ರತಿಷ್ಠಿತ ಅಂತರ್ರಾಷ್ಟ್ರೀಯ ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ವಿ. ಕಾಮತ್ ಅವರು ತಮ್ಮ ಸ್ನೇಹಿತರೊಂದಿಗೆ ಮಡಿಕೇರಿಯಲ್ಲಿ 2 ದಿನಗಳ ಕಾಲ ವಿಶ್ರಾಂತಿ ಪಡೆದರು.

ಚೀನಾದ ಶಾಂಘೈನಲ್ಲಿ ಪ್ರಧಾನ ಕಚೇರಿ ಹೊಂದಿದ ಈ ಬ್ಯಾಂಕ್‍ನ ಪ್ರಥಮ ಅಧ್ಯಕ್ಷರಾಗಿ ನೇಮಕಗೊಂಡ ಕನ್ನಡಿಗ ಕೆ.ವಿ. ಕಾಮತ್ ಐಸಿಐಸಿಐ ಬ್ಯಾಂಕ್‍ನ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ದೇಶದ ಪ್ರಮುಖ ಆರ್ಥಿಕ ತಜ್ಞರಲ್ಲೊಬ್ಬರಾದ ಇವರು, ತಮ್ಮ 45 ವರ್ಷ ಕಾಲದ ಹಿರಿಯ ಸ್ನೇಹಿತರೊಂದಿಗೆ ಮಡಿಕೇರಿಯ ಖಾಸಗಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದರು.

ಮುಂಜಾನೆ ಹೊರ ಆವರಣದಲ್ಲಿ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದ ಶ್ರೀಯುತರನ್ನು ‘ಶಕ್ತಿ’ ಮಾತನಾಡಿಸಿದ ಸಂದರ್ಭ ‘ಬ್ರಿಕ್ಸ್’ ಸಂಸ್ಥೆ ಅತ್ಯಂತ ಪ್ರಬಲವಾಗಿ ಬೆಳೆಯುತ್ತಿದ್ದು, ಕಳೆದ 2 ವರ್ಷಗಳಿಂದ ಭಾರತಕ್ಕೂ ಆರ್ಥಿಕ ನೆರವು ನೀಡುತ್ತಿದ್ದು, ಈ ವರ್ಷವೂ ಕೂಡಾ ವಿಸ್ತರಿಸಲಿದೆ ಎಂದರಲ್ಲದೆ, ಭಾರತ ಸದೃಢವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.