ವೀರಾಜಪೇಟೆ, ಜ. 21: ಕುಟ್ಟ ಗ್ರಾಮದ ಕೋತೂರು ಬಳಿಯ ಬೊಮ್ಮಾಡು ಹಾಡಿಯ ನಿವಾಸಿಗಳಾದ ಜೇನು ಕುರುಬರ ಬೊಳ್ಳ ಜೇನುಕುರುಬರ ನಾಗಪ್ಪ ಹಾಗೂ ಜೇನುಕುರುಬರ ದಾದು ಎಂಬ ಮೂವರಿಗೆ ಸಂಗಡಿಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪಕ್ಕಾಗಿ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ8,500 ದಂಡ ವಿಧಿಸಿ ಇಲ್ಲಿನ ಅಪರ ಹಾಗೂ ಎರಡನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಪ್ರಭು ತೀರ್ಪು ನೀಡಿದ್ದಾರೆ.ತಾ. 27.12.15 ರಂದು ರಾತ್ರಿ 7.30 ಗಂಟೆಗೆ ಜೇನುಕುರುಬರ ಕರಿಯಣ್ಣನ ಮಗಳು ಪೂಜಾ(16) ಎಂಬಾಕೆಯನ್ನು ಸನಿಹದ ಜೇನುಕುರುಬರ ನಾಗಪ್ಪ ಎಂಬಾತನ ಮಗ ಮುತ್ತಣ್ಣ ಮನೆಗೆ ಕರೆದುಕೊಂಡು ಹೋಗಿದ್ದನು. ಪತ್ನಿ ಮಾದೇವಿ ಪತಿ ಕರಿಯಣ್ಣನಿಗೆ ಮಗಳನ್ನು ಕರೆದು ಕೊಂಡು ಬರುವಂತೆ ಹೇಳಿದಳು. ಅದರಂತೆ ಕರಿಯಣ್ಣ ನಾಗಪ್ಪನ ಮನೆಗೆ ತೆರಳಿ ಪೂಜಾಳನ್ನು ಕರೆದಾಗ ಅಲ್ಲಿಯೇ ಇದ್ದ ಬೊಳ್ಳ ಕರಿಯಣ್ಣನ ತಲೆಗೆ ಕಬ್ಬಿಣದ ಪೈಪುವಿನಿಂದ ಹೊಡೆದನು.

ಅಲ್ಲಿಯೇ ಕಿರುಚಿಕೊಂಡು ಬಿದ್ದಿದ್ದ ಕರಿಯಣ್ಣನಿಗೆ ನಾಗಪ್ಪ ದೊಣ್ಣೆಯಿಂದ ಕೈ ಕಾಲು ತಲೆಗೆ ಹೊಡೆದ ನಂತರ ದಾದು ಎಂಬಾತನು ಅಡುಗೆ ಮನೆಯಿಂದ ಸೌದೆ ತಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ರಾತ್ರಿಯೇ ಗೋಣಿಕೊಪ್ಪಲು ಆಸ್ಪತ್ರೆ ಸೇರಿಸಿದಾಗ ಮಧ್ಯ ರಾತ್ರಿ ಸಾವನ್ನಪ್ಪಿದನೆಂದು ಪತ್ನಿ ಮಾದೇವಿ ಕುಟ್ಟ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಮೂರು ಮಂದಿ ವಿರುದ್ದ ಕೊಲೆ ಪ್ರಕರಣ ದಾಖಲಿಸಿ ಮೂರು ಮಂದಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.

ಮೂರು ಮಂದಿ ಆರೋಪಿಗಳು ಹಾಗೂ ಮೃತ ಕರಿಯಣ್ಣ ಸಂಗಡಿಗರಾಗಿದ್ದು,

(ಮೊದಲ ಪುಟದಿಂದ) ಇವರ ಕುಟುಂಬದ ಮೇಲೆ ದ್ವೇಷ ಸಾಧಿಸುತ್ತಿದ್ದರು ಎನ್ನಲಾಗಿದೆ. ಮಗಳನ್ನು ಕರೆದುಕೊಂಡು ಹೋಗಲು ಬಂದ ಸಮಯ ಸಾಧಿಸಿದ ಮೂರು ಮಂದಿ ಕರಿಯಣ್ಣನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಕೊಲೆಗೆ ಬಳಸಿದ ಕಬ್ಬಿನ ಪೈಪು, ದೊಣ್ಣೆ ಸೌದೆಯನ್ನು ಪೊಲೀಸರು ಸಾಕ್ಷ್ಯವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪುಕಾರುದಾರಳಾದ ಮಾದೇವಿಗೆ (28) ಕರಿಯಣ್ಣ (36) ಎರಡನೇ ಪತಿಯಾಗಿದ್ದು ಅವರಿಗೆ ಒಂದು ಗಂಡು ಹಾಗೂ ಮೂರು ಹೆಣ್ಣು ಮಕ್ಕಳಿದ್ದಾರೆ. ತಲಾ ರೂ 8500ರ ದಂಡದ ರೂಪದಲ್ಲಿ ಬರುವ ಹಣದಲ್ಲಿ ರೂ 15000 ನಗದು ಸಂತ್ರಸ್ತರಿಗೆ ನೀಡುವಂತೆ ಹಾಗೂ ದಂಡ ಪಾವತಿಸಲು ತಪ್ಪಿದರೆ ಎರಡು ತಿಂಗಳ ಸಾದಾ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

ಕೊಲೆ ಪ್ರಕರಣದ ತನಿಖಾಧಿಕಾರಿ ಕುಟ್ಟದ ಸರ್ಕಲ್ ಇನ್ಸ್‍ಪೆಕ್ಟರ್ ದಿವಾಕರ್ ಅವರು ತನಿಖಾ ವರದಿ ಹಾಗೂ ಆರೋಪ ಪಟ್ಟಿಯನ್ನು ವೀರಾಜಪೇಟೆ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರಕಾರದ ಪರ ಪ್ರಾಸಿಕ್ಯೂಟರ್ ನಾಗಪ್ಪ ಸಿ. ನಾಕ್‍ಮನ್ ವಾದಿಸಿದರು.