ಮಡಿಕೇರಿ, ಜ. 21: ಕೊಡಗು ಜಿಲ್ಲೆಯಲ್ಲಿನ ಅಭಿವೃದ್ಧಿ ಹೇಗೆ ಆಗಬೇಕು ಎಂಬದನ್ನು “ವಿಷನ್ ಕೊಡಗು” ಕಾರ್ಯಕ್ರಮ ಅರ್ಥ ಪೂರ್ಣವಾಗಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದೆ ಎಂದು “ಕನ್ನಡಪ್ರಭ” ಮೈಸೂರು ಬ್ಯೂರೋ ಮುಖ್ಯಸ್ಥರಾದ ಅಂಶಿ ಪ್ರಸನ್ನ ತಿಳಿಸಿದರು.
‘ಪ್ರಜಾಸತ್ಯ’ ದಿನಪತ್ರಿಕೆಯ ವತಿಯಿಂದ ಭಾನುವಾರದಂದು ನಗರದ ಬಾಲಭವನ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಷನ್ ಕೊಡಗು’ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಇಂದು ಕೊಡಗಿನಲ್ಲಿ ವನ್ಯ ಜೀವಿ ಮಾನವ ಸಂಘರ್ಷ,ಕಾಫಿ-ಕಿತ್ತಳೆ ಬೆಳೆಗಾರರ ಸಮಸ್ಯೆ, ಪ್ರತ್ಯೇಕ ತಾಲೂಕು ಹೋರಾಟದ ಸಮಸ್ಯೆ, ಕಂದಾಯ ಇಲಾಖೆ, ಕೃಷಿ, ಪ್ರವಾಸೋದ್ಯಮ ಹೀಗೆ ನಾನಾ ಇಲಾಖೆಗಳಲ್ಲಿ ಸಾಕಷ್ಟು ಸಮಸ್ಯೆಗಳಿದೆ. ಮಾತ್ರವಲ್ಲದೆ ಕೊಡಗಿನ ಪರಿಸರಕ್ಕೆ ಕಂಟಕವಾಗುವಂತಹ ರೈಲು ಮಾರ್ಗದ ಯೋಜನೆಯೂ ಜಾರಿಗೆ ಬರುತ್ತಿದೆ. ಇದರಿಂದ ಇಲ್ಲಿನ ಜನತೆಗೆ ಸಾಕಷ್ಟು ತೊಂದರೆಯಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರವಾಸೋದ್ಯಮದಲ್ಲಿ ತನ್ನದೇ ಆದ ಪ್ರಾಶಸ್ತ್ಯವನ್ನು ಕಂಡುಕೊಂಡಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ರೆಸಾರ್ಟ್ಗಳು, ನಾಯಿಕೊಡೆಗಳಂತೆ ತಲೆಯೆತ್ತುತ್ತಿವೆ. ಪ್ರವಾಸಿಗರು ಮೋಜು, ಮಸ್ತಿ ಮಾಡಿಕೊಂಡು ಸುಂದರವಾಗಿರುವ ಕೊಡಗಿನ ಪರಿಸರವನ್ನು ಹಾಳು ಗೆಡವುತ್ತಿದ್ದಾರೆ ಎಂದರು. ಗಿರಿಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ದೇವರಕಾಡುಗಳು ನಾಶವಾಗುತ್ತಿದೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ದುರಂತ ಎದುರಾಗುವದರಲ್ಲಿ ಸಂಶಯವಿಲ್ಲ. ನಿರ್ದಿಷ್ಟ ಮೂಲ ಉದ್ದೇಶ ಗಳಿಗೋಸ್ಕರ ಪರಿಸರವನ್ನು ಉಳಿಸುವ ಯೋಜನೆಗಳನ್ನು ಸರ್ಕಾರ ಮಾಡಬೇಕು ಅದರ ಹೊರತಾಗಿ ಸ್ಥಳೀಯರಿಗೆ, ಜಿಲ್ಲೆಯ ಮೂಲ ನಿವಾಸಿಗಳಿಗೆ ತೊಂದರೆ ಕೊಡವಂತಾಗಬಾರದು ಎಂದು ವೇದಿಕೆಯಲ್ಲಿದ್ದ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಜಾಸತ್ಯ ದಿನ ಪತ್ರಿಕೆಯ ಸಂಪಾದಕರಾದ ಡಾ.ಬಿ.ಸಿ.ನವೀನ್ ಕುಮಾರ್ ಭಾರತವು ಪ್ರಪಂಚದಲ್ಲೇ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಉತ್ತಮ ಸಂವಿಧಾನವನ್ನು ಹೊಂದಿದ್ದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಮಾದರಿಯಾಗಿದೆ. ದೇಶದಲ್ಲಿ ಮತದಾರರು ತಮ್ಮ ಸಂಪೂರ್ಣ ಅಧಿಕಾರವನ್ನು ಚುನಾಯಿತ ಪ್ರತಿನಿಧಿಗಳಿಗೆ ವರ್ಗಾಯಿಸಿ ಐದು ವರ್ಷಗಳ ಕಾಲ ನಿಶ್ಚಿಂತೆಯಿಂದ ಇರುತ್ತಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ದೈನಂದಿನ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ದೇಶದ ಬಹುಮುಖ್ಯ ಜಿಲ್ಲೆ. ಏಕೆಂದರೆ ದಕ್ಷಿಣ ಭಾರತದ ಜೀವನದಿ ಕಾವೇರಿ ಒಳ ಹರಿವು 50%, ಕೊಡಗಿನಿಂದ ಬರುತ್ತದೆ. ದಕ್ಷಿಣ ಭಾರತದ 8 ಕೋಟಿ ಜನರು ಮತ್ತು 600 ಕೈಗಾರಿಕೆಗಳು ಕಾವೇರಿ ನದಿಯ ಅಸ್ತಿತ್ವದ ಮೇಲೆ ನಿಂತಿದೆ. ಕೊಡಗು ದೇಶಕ್ಕೆ ಶೇ. 40 ಕಾಫಿ ಕೊಡುಗೆ ನೀಡುತ್ತಿದೆ ಎಂದರು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಕೊಡಗು ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ಇಲ್ಲಿನ ಜನರು ಕೃಷಿಗೆ ಹೆಚ್ಚು ಒತ್ತಾಸೆ ನೀಡುತ್ತಾರೆ ಎಂದರು. ಇಂದು ಜಿಲ್ಲೆಯಲ್ಲಿ ಸಾಕಷ್ಟು ಮೂಲಭೂತವಾದ ಸಮಸ್ಯೆಗಳಿದ್ದು ಗಿರಿ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುತ್ತಿಲ್ಲ. ಒಂದೆಡೆ ರಸ್ತೆ ನಿರ್ಮಾಣ ಮಾಡಿದರೆ ಅರಣ್ಯ ನಾಶವಾಗುತ್ತದೆ, ಇನ್ನೊಂದೆಡೆ ಆನೆ-ಮಾನವ ಸಂಘರ್ಷ, ಮತ್ತೊಂದೆಡೆ ಕಾಡುಗಳ ನಡುವೆ ವಾಸಿಸುವವರಿಗೆ ವಸತಿ, ಆಹಾರ, ವಸ್ತ್ರ, ವಿದ್ಯುಚ್ಛಕ್ತಿ ಸೌಲಭ್ಯವನ್ನು ನೀಡಲಾಗುತ್ತಿಲ್ಲ, ನೀರಿನ ಬವಣೆಯಿಂದ ಕೃಷಿಯಿಂದ ಕೃಷಿಕರು ವಿಮುಖರಾಗುತ್ತಿದ್ದಾರೆ ಇವುಗಳೆಲ್ಲದರ ಕುರಿತು ಚಿಂತನೆ ನಡೆಸಬೇಕಾಗುತ್ತದೆ ಎಂದರು. ಇಂದು ಭಾಗಮಂಡಲ- ತಲಕಾವೇರಿ ಕೇವಲ ಕೊಡಗಿನ ಜನರಿಗೆ ಮಾತ್ರ ಧಾರ್ಮಿಕ ಪ್ರದೇಶವಾಗಿ, ಪ್ರವಾಸಿಗರಿಗೆ ಮೋಜು-ಮಸ್ತಿ ಮಾಡುವ ತಾಣವಾಗಿ ಪರಿಣಮಿಸಿದೆ. ಕೊಡಗಿನ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದ್ದು ಈ ಕುರಿತು ಎಚ್ಚರ ವಹಿಸಬೇಕಾಗಿದೆ ಎಂದು ತಿಳಿಸಿದರು. ಹಿರಿಯರು ಕಲಿಸಿಕೊಟ್ಟ ಆಚಾರ ವಿಚಾರಗಳನ್ನು ಮೈಗೂಡಿಸಿ ಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ರಸ್ತೆಗಳೇ ಸರಿಯಾದ ವ್ಯವಸ್ಥೆಯಲ್ಲಿ ಇಲ್ಲ ಎಂದಾದ ಮೇಲೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ವಿಮರ್ಶಿಸಿದ ಅವರು, ಅಭಿವೃದ್ಧಿ ವಿಚಾರಗಳಲ್ಲಿ ರಾಜಕೀಯ ಬೇಡ ಎಂದು ಸಲಹೆ ನೀಡಿದರು.
ತಜ್ಞರ ಸಮಿತಿ
ವಿಷನ್ ಕೊಡಗು ಕಾರ್ಯಕ್ರಮದಲ್ಲಿ ಕೊಡಗಿನ ಸಮಸ್ಯೆಗಳು ಮತ್ತು ಕೊಡಗು ಭವಿಷ್ಯದಲ್ಲಿ ಏನಾಗಬೇಕು ಎಂಬದರ ಕುರಿತು ಜಿಲ್ಲೆಯಾದ್ಯಂತ ಚರ್ಚೆ ನಡೆÉಯಬೇಕು. ಈ ಚರ್ಚೆಯ ಫಲಶ್ರುತಿಯಾಗಿ ವಿಷಯ ತಜ್ಞರು ಮತ್ತು ಬುದ್ದಿಜೀವಿಗಳು ಹಾಗೂ ಸಾರ್ವಜನಿಕ ಕ್ಷೇತ್ರದ ಗಣ್ಯರು ಸೇರಿದಂತೆ ಒಂದು ಸಮಿತಿ ರಚನೆಯಾಗಿ ತಾರ್ಕಿಕ ಅಂತ್ಯ ಕಾಣುವಲ್ಲಿ ಮುಂದಾಗಬೇಕೆಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಕರೆ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಕ್ಷೇತ್ರ ವಿಂಗಡಣೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ಇಲ್ಲಿ ಪೂರ್ಣ ಪ್ರಮಾಣದ ಸಂಸದರಿಲ್ಲ. ಪ್ರತ್ಯೇಕ ಲೋಕಸಭೆ ಹಾಗೂ ವಿಧಾನ ಸಭಾ ಕ್ಷೇತ್ರಗಳ ಅಗತ್ಯವಿದೆ ಎಂದರು. ಜಿಲ್ಲೆಯ ಜನರ ಕಣ್ಣೀರನ್ನು ಒರೆಸಲು ರಾಜ್ಯ ಮತ್ತು ರಾಷ್ಟ್ರ ಬೆಂಗಳೂರು ಮತ್ತು ಗೋವಾ ಪ್ರದೇಶಗಳಲ್ಲಿ ತಲಾ 35 ಸಾವಿರ ಜನಸಂಖ್ಯೆಯ ಅನುಗುಣವಾಗಿ ಶಾಸಕ ಮತ್ತು ಸಂಸದ ಕ್ಷೇತ್ರಗಳನ್ನು ರಚಿಸಲಾಗಿದೆ. ಆದರೆ ಕೊಡಗಿನಲ್ಲಿ 5 ಲಕ್ಷ ಜನಸಂಖ್ಯೆಯಿದ್ದರೂ ಎರಡೇ ಕ್ಷೇತ್ರವಾಗಿ ಕುಂಠಿತಗೊಳಿಸಲಾಗಿದೆ ಎಂದು ವಿಷಾದಿಸಿದರು.
ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿ ಕೆಲಸಗಳು ಮತ್ತು ಶಾಸನ ಸಭೆಗಳಲ್ಲಿ ಜನರ ಕೆಲಸಗಳು ಸುಲಲಿತವಾಗಿ ಆಗಬೇಕೆಂದರೆ ಶಾಸಕರಾದವರಿಗೆ ತಮ್ಮ ಜವಾಬ್ದಾರಿಯ ಅರಿವಿರಬೇಕು. ಜೊತೆಗೆ ಜನಸಾಮಾನ್ಯರು ಶಾಸಕರು ತಮ್ಮ ಜನಸೇವಾ ಕಾರ್ಯಕ್ರಮಗಳಲ್ಲಿ ವಿಫಲತೆಯನ್ನು ಕಂಡರೆ ಅವರನ್ನು ವಾಪಸು ಕರೆಸುವ ಅಧಿಕಾರವನ್ನು ಕಲ್ಪಿಸಬೇಕಾದ ಅಗತ್ಯತೆ ಇದೆಯೆಂದು ಸಭೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಎಚ್. ಎಸ್. ಚಂದ್ರಮೌಳಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಉನ್ನತ ಹಂತದ ಶೈಕ್ಷಣಿಕ ಅವಕಾಶಗಳು ಕಡಿಮೆಯಿದ್ದು, ಇನ್ನೂ ಕೂಡ ಕೇಂದ್ರೀಯ ಶಾಲಾ ಪಠ್ಯ ಕ್ರಮದ ಶಾಲೆಗಳು ನಮ್ಮಲ್ಲಿ ವಿರಳ ಸಂಖ್ಯೆಯಲ್ಲಿದ್ದು, ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಮೊದಲಾದ ಉನ್ನತ ಹಂತದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಾವು ಸಿದ್ಧರಾಗಿಲ್ಲ. ಈ ಬಗ್ಗೆ ಜನಪ್ರತಿನಿಧಿ ಗಳು ಚಿಂತಿಸಬೇಕಿದೆ. ಶಾಸನ ಸಭೆಗಳಲ್ಲಿ ಎಷ್ಟು ಮಂದಿ ಶಾಸಕರು ರೀತಿ-ನೀತಿಗಳನ್ನು, ನಡಾವಳಿಗಳನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಪ್ರಶ್ನಿಸಿದ ಅವರು ರಾಜಕೀಯ ಪಕ್ಷವಾರು ಸಂಘಟನೆ ಕೇವಲ ಚುನಾವಣೆಗೆ ಮಾತ್ರ ಸೀಮಿತ ವಾಗಿರಬೇಕೆಂದು ಕರೆ ನೀಡಿದರು.
ಅಧಿಕಾರ ಅಭಿವೃದ್ಧಿಯತ್ತ
ಜನಪ್ರತಿನಿಧಿಗಳಿಗೆ ಲಭ್ಯವಾಗಿರುವ ಅಧಿಕಾರವನ್ನು ಅಭಿವೃದ್ಧಿಯ ಕಡೆಗೆ ಹರಿಸಿ ಕೆಲಸ ಮಾಡುವ ಇಚ್ಛಾಶಕ್ತಿ ಆಸಕ್ತಿ ಬೇಕು. ರಾಜ್ಯದ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಸಂಪತ್ತನ್ನು ವಿಕೇಂದ್ರೀಕರಣಗೊಳಿಸಿ ಸಮಾಜ ಮುಖಿಯಾಗಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಜನ ಕಲ್ಯಾಣಕ್ಕೆ ಅಗತ್ಯವಾದ ಅಡಿಪಾಯವನ್ನು ಹಾಕಿ ಕೊಡಬೇಕಾಗಿದೆ ಎಂದು ಮಾಜಿ ಸಚಿವ ಬಿ.ಎ ಜೀವಿಜಯ ಹೇಳಿದ್ದಾರೆ.
ವಿಷನ್ ಕೊಡಗು ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಮಾತನಾಡಿದ ಅವರು, ಕರ್ನಾಟಕ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದು ದಶಕಗಳು ಕಳೆದರೂ ಕೂಡ ಕೊಡಗಿಗೆ ಸಂಬಂಧಪಟ್ಟ ಕಂದಾಯ ಇಲಾಖೆಯ ಅನೇಕ ರೀತಿಯ ಸಮಸ್ಯೆಗಳು ಪರಿಹಾರವಾಗಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು ಕಾಯ್ದೆ ಕಾನೂನುಗಳನ್ನು ಶಾಸಕ, ಮಂತ್ರಿ ಹಾಗೂ ಒಟ್ಟು ಕ್ಯಾಬಿನೆಟ್ ಅರ್ಥ ಮಾಡಿಕೊಳ್ಳದೇ ಹೋದರೆ ಸಮಾಜಮುಖಿಯಾಗಿ ಕೆಲಸ ಮಾಡುವ ಇಚ್ಛೆ ಹಾಗೂ ಆಸಕ್ತಿಯಿದ್ದರೂ ಕೂಡ ಸಾಧ್ಯವಾಗುತ್ತಿಲ್ಲ ಎಂದು ವಿಷಾದದಿಂದ ನುಡಿದರು.
ಅತ್ಯಾಧುನಿಕ ಆಸ್ಪತ್ರೆಗಳು ಬೇಕು
ಇತ್ತೀಚಿನ ವರ್ಷಗಳಲ್ಲಿ ದಿಢೀರ್ ಎಂದು ಎದುರಾಗುತ್ತಿರುವ ಹೃದಯ ಸ್ತಂಭನ, ರಕ್ತದ ಒತ್ತಡ ಇನ್ನಿತರ ಕಾಯಿಲೆಗಳಗೆ ಕೊಡಗಿನಲ್ಲಿ ತಕ್ಷಣ ಚಿಕಿತ್ಸೆ ನೀಡಲು ಮೂರೂ ತಾಲೂಕುಗಳಲ್ಲಿ ಅತ್ಯಾಧುನಿಕ ಆಸ್ಪತ್ರೆಯ ಅಗತ್ಯವಿದ್ದು ಈ ನಿಟ್ಟಿನಲ್ಲಿ ಸ್ಪಂದಿಸುವದಾಗಿ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು.
ತನ್ನ ಪ್ರಕಾರ ವಿದೇಶಗಳಲ್ಲಿ ಚಾಲ್ತಿಯಲ್ಲಿರುವಂತೆ ಜಿಲ್ಲೆಯನ್ನು ಪ್ರವೇಶಿಸುವ ಕುಶಾಲನಗರ, ಸಂಪಾಜೆ, ಕುಟ್ಟ, ಕರಿಕೆ ಮತ್ತು ಮಾಕುಟ್ಟ ಗಡಿ ಗೇಟುಗಳಲ್ಲಿ ಶುಲ್ಕವನ್ನು ವಸೂಲು ಮಾಡುವದರಿಂದ, ರಾಜಾಸೀಟಿನಂತೆ ವೀರಾಜಪೇಟೆ ಮತ್ತು ಸೋಮವಾಪೇಟೆ ತಾಲೂಕಿನಲ್ಲಿ ಉದ್ಯಾನವನಗಳನ್ನು ಸ್ಥಾಪಿಸಿ ಅವುಗಳಿಗೆ ಶುಲ್ಕ ವಿಧಿಸಿ, ಪುರಾತನ ಸನ್ನಿಧಿಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಂದ ಶುಲ್ಕ ವಸೂಲಿ ಮೂಲಕ ಅಭಿವೃದ್ದಿ ಪಡಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಕನ್ನಡಪ್ರಭ ಮೈಸೂರು ಬ್ಯೂರೋ ಮುಖ್ಯಸ್ಥರಾದ ಅಂಶಿ ಪ್ರಸನ್ನ ಅವರನ್ನು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿ ಗೌರವಿಸಿದರು. ಪ್ರಜಾಸತ್ಯ ಬಳಗದ ಚಿತ್ರಾ ನಾಣಯ್ಯ ಪ್ರಾರ್ಥಿಸಿ, ಎಂ.ಎಸ್. ಸುನೀಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.