ಮಡಿಕೇರಿ, ಜ. 21: ತಣ್ಣಿಮಾನಿ ಗ್ರಾಮದ ಸರ್ವೇ ಸಂಖ್ಯೆ 10/1ರಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಶಾಸಕರು ಭೂಮಿ ಪೂಜೆ ನೆರವೇರಿಸಿದ್ದರೂ ಅರಣ್ಯ ಇಲಾಖೆ ಇದಕ್ಕೆ ತಡೆಯೊಡ್ಡುತ್ತಿದ್ದು, ಪರ್ಯಾಯ ಜಾಗದ ಲಭ್ಯತೆಯೂ ಇಲ್ಲದಾಗಿದೆ. ಅಭಿವೃದ್ಧಿಯ ವಿಚಾರದಲ್ಲಿ ಅರಣ್ಯ ಇಲಾಖೆ ಹಸ್ತಕ್ಷೇಪ ಮಾಡುವದನ್ನು ನಿಲ್ಲಸಬೇಕೆಂದು ತಲಕಾವೇರಿ-ಭಾಗಮಂಡಲ ಭಕ್ತ ಜನ ಸಂಘ ಆಗ್ರಹಿಸಿದೆ.ಸುದ್ದಿಗೋಷ್ಠಿಯಲ್ಲಿ ಸಂಘದ ಸಂಚಾಲಕ ಕುದುಕುಳಿ ಭರತ್ ಕುಮಾರ್ ಹಾಗೂ ಪದಾಧಿಕಾರಿಗಳು ಮಾತನಾಡಿ, ಮಳೆÉಗಾಲದಲ್ಲಿ ತ್ರಿವೇಣಿ ಸಂಗಮ ದ್ವೀಪದಂತಾಗುವದರಿಂದ ಸರ್ಕಾರ ಈಗಾಗಲೆ ಮೇಲು ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಈ ಯೋಜನೆಯನ್ನು ಯಾರೂ ವಿರೋಧಿಸಬಾರದೆಂದು, ದೇವಸ್ಥಾನಕ್ಕೆ ಸೇರಿದ 25 ರಿಂದ 30 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮತ್ತು ಪ್ರವಾಸಿಗರು ಅಡುಗೆ ಮಾಡಿಕೊಳ್ಳಲು ಸುಸಜ್ಜಿತ ಭವನ ನಿರ್ಮಿಸಬೇಕೆಂದು ಒತ್ತಾಯಿಸಿ ದರು.

ತಕ್ಷಣ ಎರಡು ಕ್ಷೇತ್ರಗಳ ಸಮಸ್ಯೆಗಳಿಗೆ ಆಡಳಿತ ವ್ಯವಸ್ಥೆ ಸ್ಪಂದಿಸದಿದ್ದಲ್ಲಿ ಗ್ರಾಮಸ್ಥರು ಒಗ್ಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಚಾಲಕರು ಎಚ್ಚರಿಕೆ ನೀಡಿದರು.

ಭಾಗಮಂಡಲ, ತಲಕಾವೇರಿ ಕ್ಷೇತ್ರದಲ್ಲಿನ ಅವ್ಯವಸ್ಥೆಗಳಿಗೆ ಮತ್ತು ಅಶುಚಿತ್ವದ ವಾತಾವರಣಕ್ಕೆ ದೇವಾಲಯದ ಆಡಳಿತ ವ್ಯವಸ್ಥೆಯ ವೈಫಲ್ಯವೇ ಕಾರಣವೆಂದು ಆರೋಪಿಸಿದ ಭಾಗಮಂಡಲ-ತಲಕಾವೇರಿ ಭಕ್ತ ಜನಸಂಘದ ಪದಾಧಿಕಾರಿಗಳು ದೇವಾಲಯದ ಬ್ಯಾಂಕ್ ಖಾತೆಯಲ್ಲಿರುವ ಸುಮಾರು 2 ಕೋಟಿ ರೂ.ಗಳನ್ನು ಕಾವೇರಿ ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳ ಬೇಕೆಂದು ಆಗ್ರಹಿಸಿದರು.

ತಾ. 15 ರಂದು ಭಾಗಮಂಡಲ ದಲ್ಲಿ ನಿಡ್ಯಮಲೆ ವಾಸುದೇವ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿ ಆರು ಮಂದಿ ಸಂಚಾಲಕರ ನೇತೃತ್ವದಲ್ಲಿ ಭಾಗಮಂಡಲ ತಲಕಾವೇರಿ ಭಕ್ತ ಜನಸಂಘವನ್ನು ರಚಿಸಲಾಯಿತು. ಎರಡೂ ಕ್ಷೇತ್ರಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು ಎಂದರು.

ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತರು ಅಥವಾ ಪ್ರವಾಸಿಗರಿಂದ ಯಾವದೇ ಅವ್ಯವಸ್ಥೆಗಳು ಸೃಷ್ಟಿಯಾಗುತ್ತಿಲ್ಲ. ಬದಲಿಗೆ ಬರುವ ಭಕ್ತರಿಗೆ ಯಾವದೇ ವ್ಯವಸ್ಥೆಯನ್ನು ಕಲ್ಪಿಸದ ಆಡಳಿತ ವ್ಯವಸ್ಥೆಯಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಸಂಚಾಲಕರುಗಳು ಆರೋಪಿಸಿದರು. ರಜಾ ದಿನಗಳಲ್ಲಿ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಇವರುಗಳಿಗೆ ಯಾವದೇ ಮಾರ್ಗದರ್ಶನ, ಮಾರ್ಗಸೂಚಿ, ಸಲಹೆಗಳನ್ನು ನೀಡುವ ವ್ಯವಸ್ಥೆ ಇಲ್ಲಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಮತ್ತು ಅಡುಗೆಗೆ ಸೂಕ್ತ ಸಭಾಂಗಣದ ಸೌಲಭ್ಯವಿಲ್ಲ. ಈ ಎಲ್ಲಾ ಕಾರಣಗಳಿಂದ ಪ್ರವಾಸಿಗರು ಎಲ್ಲೆಂದರಲ್ಲಿ ಅಡುಗೆ ಮಾಡುತ್ತಾರೆ. ಭಕ್ತರ ಸಂಖ್ಯೆ ಹೆಚ್ಚಾದಂತೆಲ್ಲ, ಪರಿಸರ ಅಶುಚಿತ್ವಗೊಳ್ಳುವದು ಸಾಮಾನ್ಯ. ಇದನ್ನೆ ನೆಪ ಮಾಡಿಕೊಂಡು ಪ್ರವಾಸಿಗರೇ ಬರಬಾರದೆಂದು ಒತ್ತಾಯಿಸುವದು ಸರಿಯಲ್ಲವೆಂದು ಅಭಿಪ್ರಾಯಪಟ್ಟರು.

ಬ್ರಹ್ಮಗಿರಿಗೆ ನಿರ್ಬಂಧ ಬೇಡ

ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಬೇಕೆಂದು ಕೆಲವು ಸಂಘ ಸಂಸ್ಥೆಗಳು ಹೇಳಿಕೆ ನೀಡುತ್ತಿದ್ದು, ಇದು ಖಂಡನೀಯ. ಬ್ರಹ್ಮಗಿರಿ ಬೆಟ್ಟವನ್ನು ಹತ್ತುವ ಸಂಪ್ರದಾಯ ಈ ಹಿಂದಿನಿಂದಲೂ ಇದ್ದು, ಈ ಬೆಟ್ಟದ ಜವಾಬ್ದಾರಿಯನ್ನು ಅರಣ್ಯ ಇಲಾಖೆಗೆ ವಹಿಸುವ ಮೊದಲು ಕ್ಷೇತ್ರದ ಪಾವಿತ್ರ್ಯದ ಬಗ್ಗೆ ಆಲೋಚಿಸ ಬೇಕಾಗಿತ್ತೆಂದು ಹೇಳಿದರು. ಪ್ರವೇಶ ನಿರ್ಬಂಧದ ಕುರಿತು ಹೇಳಿಕೆ ನೀಡುವದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಭಾಗಮಂಡಲ ಗ್ರಾ.ಪಂ.ಗೆ ವಾಹನ ಸುಂಕ ಹೊರತು ಪಡಿಸಿ, ಬೇರೆ ಯಾವದೇ ಆದಾಯವಿಲ್ಲ. ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ 5 ಗ್ರಾಮಗಳ ಅಭಿವೃದ್ಧಿಯೂ ಆಗಬೇಕಾಗಿರುವದರಿಂದ ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳಿಗೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರ ವಿಶೇಷ ಅನುದಾನ ಘೋಷಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಭಾಗಮಂಡಲ ದೇವಾಲಯ ಜೀರ್ಣೋದ್ಧಾರಗೊಂಡು 10 ವರ್ಷಗಳೆ ಕಳೆದಿದ್ದರು ಮುಖ್ಯದ್ವಾರ ಮತ್ತು ಹಿಂಬಾಗಿಲುಗಳನ್ನು ಅಳವಡಿಸುವ ಕಾಳಜಿಯನ್ನು ಆಡಳಿತ ವ್ಯವಸ್ಥೆ ತೋರಿಲ್ಲ. ದೇವಾಲಯದ ಖಾತೆಯಲ್ಲಿ ಹಣವಿದ್ದರು ಬಾಗಿಲು ಅಳವಡಿಕೆಗೆ ಹಿಂದೇಟು ಹಾಕಲಾಗುತ್ತಿದೆ. ದೇವಾಲಯದ ಮೇಲ್ಛಾವಣಿಗೆ ಅಳವಡಿಸಿರುವ ತಾಮ್ರದ ಹಾಳೆಯಿಂದ ಮಳೆಗಾಲದಲ್ಲಿ ನೀರು ಸೋರುತ್ತಿದ್ದು, ಸುಬ್ರಹ್ಮಣ್ಯ ಗುಡಿಯಲ್ಲಿ ಪೂಜೆ ಮಾಡಲಾಗದ ಪರಿಸ್ಥಿತಿ ಇದೆ. ಇಷ್ಟೆಲ್ಲ ಅವ್ಯವಸ್ಥೆಗಳಿದ್ದರೂ ಆಡಳಿತ ವ್ಯವಸ್ಥೆ ಯಾವದೇ ಕಾಳಜಿಯನ್ನು ತೋರುತ್ತಿಲ್ಲವೆಂದು ಪ್ರಮುಖರು ಬೇಸರ ವ್ಯಕ್ತಪಡಿಸಿದರು.