ಮಡಿಕೇರಿ, ಜ. 21: ಜೀವನದೊಂದಿಗೆ ಆಧ್ಯಾತ್ಮವನ್ನು ಜೋಡಿಸಿ ಮುಂದುವರಿಯುವ ಕಲೆ ‘ಯೋಗವಿಜ್ಞಾನ’ ಎಂದು ಆಧ್ಯಾತ್ಮ ಗುರು ಶ್ರೀ ಎಂ ನುಡಿದರು.

ಅವರು ನಿನ್ನೆದಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಯೋಗ ವಿಜ್ಞಾನದ ಕುರಿತು ಮಾತನಾಡುತ್ತಿದ್ದರು. ತಲೆಕೆಳಗಾಗಿ ನಿಲ್ಲುವದು ಯೋಗವಲ್ಲ ಎಂದು ಹೇಳಿದ ಅವರು, ಪತಂಜಲಿ ಯೋಗಸೂತ್ರವನ್ನು ಸರಳವಾಗಿ ವಿವರಿಸಿದರು. ಯೋಗಾಭ್ಯಾಸ ಎಲ್ಲರಿಗೂ ಸಾಧ್ಯ ಎಂದು ಹೇಳಿದ ಅವರು, ಭಗವದ್ಗೀತೆ, ಉಪನಿಷತ್ತುಗಳು, ಘೋರಕನಾಥರ ಸಿದ್ಧಸಿದ್ಧಾಂತ ಪದ್ಧತಿ, ಘೋರಕ್ಷ ಶತಕ ಇತ್ಯಾದಿ ಪ್ರಗಲ್ಭ ಗ್ರಂಥಗಳು ಯೋಗ ವಿಜ್ಞಾನವನ್ನು ಎತ್ತಿಹಿಡಿದಿವೆ ಎಂದರು.

ಸೂಕ್ತ ರೀತಿಯಲ್ಲಿ ಧ್ಯಾನ, ಯೋಗಗಳನ್ನು ಅಳವಡಿಸಿಕೊಂಡದ್ದೇ ಆದಲ್ಲಿ ಭೌತಿಕ ಜಗತ್ತಿನಲ್ಲಿದ್ದುಕೊಂಡೇ ಪಾರಮಾರ್ಥದತ್ತ ಸಾಗಲು ಸಾಧ್ಯ ಎಂದು ಶ್ರೀ ಎಂ. ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ವಿದ್ಯಾಭವನ ಕೊಡಗು ಘಟಕದ ವತಿಯಿಂದ ಮಡಿಕೇರಿಯಲ್ಲಿ ಆಯೋಜಿತವಾಗಿದ್ದ ಯೋಗ ವಿಜ್ಞಾನ - ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಜಗತ್ತುಗಳ ನಡುವಿನ ಸಮತೋಲನ ಎಂಬ ವಿಚಾರದ ಬಗ್ಗೆ ಉಪನ್ಯಾಸ ನೀಡಿದ ಶ್ರೀ ಎಂ ಎಂದೇ ಖ್ಯಾತರಾದ ಮಮ್ತಾಜ್ ಆಲಿ, ಪತಂಜಲಿಯ ಅಷ್ಟಾಂಗ ಯೋಗ ಸೂತ್ರದಲ್ಲಿ ಹೇಳಿರುವಂತೆ ಯಮ ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸೂಕ್ತ ರೀತಿಯಲ್ಲಿ ಅಭ್ಯಸಿಸಿದರೆ ಸಮತೋಲನ ಸಾಧ್ಯ ಎಂದರು.

ಮಹಾರಾಜ ಜನಕ ರಾಜನಾಗಿದ್ದುಕೊಂಡೇ ಋಷಿಯಂಥ ಔನತ್ಯವನ್ನು ತಲುಪಿದ ಎಂದು ಉದಾಹರಣೆ ಸಹಿತ ತಿಳಿಸಿದ ಶ್ರೀ ಎಂ, ಇದೇ ರೀತಿ ಅನೇಕ ಕಥೆಗಳ ಮೂಲಕ ಯೋಗ ವಿಜ್ಞಾನ - ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಜಗತ್ತುಗಳ ನಡುವಿನ ಸಮತೋಲನ ವಿಷಯದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಜೀವನದಲ್ಲಿ ಅನುಕೂಲಕ್ಕೆ ತಕ್ಕಷ್ಟು ಸೌಕರ್ಯ ಸಂಪಾದಿಸಿ, ಸರಳ ಜೀವನ ನಡೆಸುವದು ಸಮತೋಲನ ಜೀವನ ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಉಪನ್ಸಾಸಕಿ, ಸಾಹಿತಿ ನಯನ ಕಶ್ಯಪ್ ನಿರೂಪಿಸಿ, ಭಾರತೀಯ ವಿದ್ಯಾಭವನದ ನಿಕಟಪೂರ್ವ ಅಧ್ಯಕ್ಷ ಕೆ.ಪಿ. ಉತ್ತಪ್ಪ ಸ್ವಾಗತಿಸಿ, ವಿದ್ಯಾಭವನದ ಕೊಡಗು ಘಟಕದ ಖಚಾಂಜಿ ಡಾ. ಮನೋಹರ್ ಜಿ.ಪಾಟ್ಕರ್ ವಂದಿಸಿದರು.

ತಾನು ನಾಥಪಂತಕ್ಕೆ ಸೇರಿದ್ದು, ತನ್ನ ಗುರು ಬಾಬುಜಿ ನನ್ನನ್ನು ಮಧುಕರ ನಾಥ್ ಎಂದು ಹೆಸರಿಸಿದ್ದರು ಎಂದು ‘ಎಂ’ ಹೇಳಿದರು.