ಮಡಿಕೇರಿ, ಜ. 21: ಸಹಕಾರ ಕ್ಷೇತ್ರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಜಿಲ್ಲೆಯಲ್ಲಿರುವ ದವಸ ಭಂಡಾರಗಳನ್ನು ಉಳಿಸಲು ಪ್ರಯತ್ನಿಸಬೇಕಿದೆ ಎಂದು ರಾಜ್ಯ ಸಹಕಾರ ಮಹಾ ಮಂಡಳಿಯ ನಿರ್ದೇಶಕ ಎ.ಕೆ. ಮನುಮುತ್ತಪ್ಪ ಸಲಹೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಕೊಡಗು ಜಿಲ್ಲಾ ಸಹಕಾರ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸಹಕಾರ ಸಭಾಂಗಣದಲ್ಲಿ ದವಸ ಭಂಡಾರಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಸಹಕಾರ ಚುನಾವಣೆ ಮತ್ತು ಲೆಕ್ಕಪತ್ರ ನಿರ್ವಹಣೆ ಕುರಿತು ನಡೆದ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದವಸ ಭಂಡಾರ ಚಳುವಳಿಯು 1918ರಲ್ಲಿ ಬಾಗಮಂಡಲದಲ್ಲಿ ಆರಂಭವಾಗಿತ್ತು. ಇಂದು ಸಹಕಾರ ಸಂಘದಿಂದ ದವಸ ಭಂಡಾರಕ್ಕೆ ಕೆಲಸವಿಲ್ಲದಂತಾಗಿದೆ. ದವಸ ಭಂಡಾರಗಳು ಜೀವಂತವಾಗಿರಬೇಕು. ಕೊಡಗಿನಲ್ಲಿ 96 ದವಸ ಭಂಡಾರಗಳು ಅಸ್ತಿತ್ವದಲ್ಲಿವೆ. ಅದರಲ್ಲಿ 41 ಮಾತ್ರ ಲಾಭದಲ್ಲಿವೆ, ಉಳಿದವು ನಷ್ಟದಲ್ಲಿವೆ ಎಂದು ತಿಳಿಸಿದರು.

ಸಹಕಾರ ನಿಯಮ ಎಲ್ಲರಿಗೂ ಒಂದಾಗಿದ್ದು ಕಟ್ಟುನಿಟ್ಟಾಗಿ ಅನುಸರಿಸಬೇಕಿದೆ ಎಂದು ಮನುಮುತ್ತಪ್ಪ ಸಲಹೆ ಮಾಡಿದರು.

ಕೊಡಗು ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಬಿ.ಬಿ. ನಾಣಯ್ಯ ಮಾತನಾಡಿ, ಹಿಂದೆ ಪ್ರತಿಯೊಂದು ಕುಟುಂಬದಲ್ಲೂ ದವಸ ಭಂಡಾರ ಇತ್ತು. ಇತ್ತೀಚಿನ ದಿನಗಳಲ್ಲಿ ದವಸ ಭಂಡಾರಗಳು ಕಡಿಮೆಯಾಗಿವೆ. ದವಸ ಭಂಡಾರಗಳನ್ನು ಉಳಿಸುವಂತಾಗಬೇಕು ಎಂದರು.

ಸಹಕಾರ ಸಂಘದ ಸಹಾಯಕ ನಿಬಂಧಕ ರವಿಕುಮಾರ್, ಕೆ.ಐ.ಸಿ.ಎಂ ಪ್ರಾಂಶುಪಾಲ ಪುಟ್ಟಸ್ವಾಮಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ.ಎಲ್. ಜ್ಯೋತೀಂದ್ರ, ಸಹಕಾರ ಸಂಘಗಳ ಹಿರಿಯ ಲೆಕ್ಕಪರಿಶೋಧಕ ಸಿರಿಲ್ ಮೊರಿಸ್, ಯೋಗೇಂದ್ರ ನಾಯಕ್ ಇತರರು ಇದ್ದರು.