ಕುಶಾಲನಗರ, ಜ. 21: ಶ್ರವಣ ಬೆಳಗೋಳದಲ್ಲಿ ನಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 33ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ‘ಶಕ್ತಿ’ ಪತ್ರಿಕೆಯ ಉಪ ಸಂಪಾದಕ ಕಾಯಪಂಡ ಶಶಿ ಸೋಮಯ್ಯ ‘ಶಕ್ತಿ’ಯ ಕುಶಾಲನಗರ ವರದಿಗಾರ ಎಂ.ಎನ್. ಚಂದ್ರಮೋಹನ್ ಅವರುಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಯಿತು.
ಶ್ರವಣಬೆಳಗೋಳ ಕ್ಷೇತ್ರದ ಜಗದ್ಗುರು ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮತ್ತು ಸಚಿವೆ ಡಾ. ಗೀತಾ ಮಹಾದೇವಪ್ರಸಾದ್, ರಾಜ್ಯ ಸಂಘದ ಅಧ್ಯಕ್ಷÀ ಎನ್.ರಾಜು ಮತ್ತಿತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಶಶಿ ಸೋಮಯ್ಯ ಅವರ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಅತ್ಯುತ್ತಮ ಗ್ರಾಮಾಂತರ ವರದಿಗೆ ಜಿ.ನಾರಾಯಣಸ್ವಾಮಿ ಪ್ರಶಸ್ತಿ ಮತ್ತು ಚಂದ್ರಮೋಹನ್ ಅವರು ಶಕ್ತಿಯಲ್ಲಿ ವರದಿ ಮಾಡಿದ ಅತ್ಯುತ್ತಮ ಅರಣ್ಯ ಸುದ್ದಿ ವರದಿಗೆ ಮಂಡಿಬೆಲೆ ರಾಜಣ್ಣ ಪ್ರಶಸ್ತಿ ಲಭಿಸಿದೆ. ಶಶಿ ಸೋಮಯ್ಯ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಪ್ರಶಸ್ತಿಯನ್ನು ಅವರ ಪರವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮತ್ತು ರಾಜ್ಯ ಪ್ರತಿನಿಧಿ ಅನು ಕಾರ್ಯಪ್ಪ ಪಡೆದುಕೊಂಡರು.
ಈ ಪ್ರಶಸ್ತಿಯನ್ನು ರಮೇಶ್ ಕುಟ್ಟಪ್ಪ ಮತ್ತು ಜಿಲ್ಲೆಯ ಪತ್ರಕರ್ತ ಸದಸ್ಯರು ಮೈಸೂರಿನ ಆಸ್ಪತ್ರೆಗೆ ತೆರಳಿ ಶಶಿ ಸೋಮಯ್ಯ ಅವರಿಗೆ ಹಸ್ತಾಂತರಿಸಿದರು.
ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಸಂಘದ 15 ಮಂದಿ ಪತ್ರಕರ್ತರು ಪಾಲ್ಗೊಂಡಿದ್ದರು.