ಒಡೆಯನಪುರ, ಜ. 21: ಕ್ರೀಡಾ ತರಬೇತುದಾರರು, ಪೋಷಕರು ಹಾಗೂ ಜನರ ಪ್ರೋತ್ಸಾಹ ಇದ್ದರೆ ಕ್ರಿಡಾಪಟುಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಂತರ್ರಾಷ್ಟ್ರೀಯ ಹಾಕಿ ಪಟು ಎಸ್.ವಿ.ಸುನೀಲ್ ಅಭಿಪ್ರಾಯ ಪಟ್ಟರು. ಗುಡುಗಳಲೆ ಜಯದೇವ ಜಾತ್ರಾ ಮೈದಾನದಲ್ಲಿ 2018ನೇ ಸಾಲಿನ ಜಿಲ್ಲಾಮಟ್ಟದ ವೀರಶೈವ ಲಿಂಗಾಯಿತ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಜೋತಿಯನ್ನು ಬೆಳಗಿಸಿ ಅವರು ಮಾತನಾಡಿದ್ದರು. ಶಾಲಾ ಕಾಲೇಜು ಹಂತದಲ್ಲಿರುವಾಗ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಕ್ರೀಡಾ ಪ್ರತಿಭೆ ಅಡಗಿರುತ್ತದೆ, ಇದನ್ನು ಪೋಷಕರು ಮತ್ತು ಶಾಲೆಯ ದೈಹಿಕ ಶಿಕ್ಷಕರು ಗುರುತಿಸಿ ಉತ್ತಮ ಕ್ರೀಡಾಪಟುಗಳಾಗಿ ತಯಾರು ಮಾಡಬೇಕೆಂದರು.

ರಾಷ್ಟ್ರೀಯ ಕ್ರೀಡಾ ತರಬೇತುದಾರರಾದ ದೇವರಾಜಮ್ಮ ಮಾತನಾಡಿ, ವೀರಶೈವ ಸಮಾಜದ ಬಾಂಧವರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ಸಮಾಜದಲ್ಲಿ ಇತರೆ ಜನಾಂಗದವರಿಗೆ ಮಾದರಿಯಾಗಬೇಕೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಮಹೇಶ್ ವೀರಶೈವ ಸಮಾಜದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಹಾಗೂ ಕ್ರೀಡಾಕ್ಷೇತ್ರದ ಬೆಳವಣಿಗೆಗಾಗಿ ಪ್ರತಿವರ್ಷ ಸಮಾಜದ ವತಿಯಿಂದ ಜಿಲ್ಲಾಮಟ್ಟದ ವೀರಶೈವ ಕ್ರೀಡಾಕೂಟ ವನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.

(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ, ಕಲ್ಲುಮಠದ ಮಹಾಂತಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯಸ್ವಾಮಿ, ಅಖಿಲ ಭಾರತ ವೀರಶೈವ ಮಹಾ ಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಹಂಡ್ಲಿ ಗ್ರಾ.ಪಂ.ಅಧ್ಯಕ್ಷ ಸಂದೀಪ್, ಪ್ರಮುಖರಾದ ಎಸ್.ಸಿ. ಶರತ್‍ಶೇಖರ್, ಡಿ.ಬಿ. ಸೋಮಪ್ಪ, ಸಿ.ವಿ. ವಿಶ್ವನಾಥ್, ವೀರಾಜಪೇಟೆ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಎನ್. ಸಂದೀಪ್ ಮುಂತಾದವರು ಇದ್ದರು. ಕ್ರೀಡಾಕೂಟದ ಅಂಗವಾಗಿ ಬೈಕ್ ಜಾಥಾ ನಡೆಸಿಯಿತು. -ವಿ.ಸಿ.ಸುರೇಶ್ ಒಡೆಯನಪುರ