ವರದಿ: ಟಿ.ಎಲ್.ಶ್ರೀನಿವಾಸ್
ಗೋಣಿಕೊಪ್ಪಲು, ಜ. 21: ವಿಶ್ವ ಕಾಫಿ ಮಾರುಕಟ್ಟೆಯಲ್ಲಿ ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ದರ ಕುಸಿಯುತ್ತಿರುವದು ಆತಂಕಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಕಾಫಿ ಬೆಳೆಯುವ ರಾಷ್ಟ್ರಗಳು ಕಾಫಿ ಉದ್ಯಮ ರಕ್ಷಣೆಗೆ ಹೊಸ ಕಾರ್ಯಯೋಜನೆ ಹಾಕಿಕೊಳ್ಳಬೇಕಾಗಿದೆ. ಅದರಲ್ಲೂ ಚೀನಾ ಹಾಗೂ ಭಾರತ ವಿಶ್ವದಲ್ಲಿಯೇ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿದ್ದು ಕಾಫಿ ಆಂತರಿಕ ಬಳಕೆಯನ್ನು ಹೆಚ್ಚಿಸಿದ್ದಲ್ಲಿ ಬೆಳೆಗಾರರಿಗೆ ತಾವು ಬೆಳೆದ ಕಾಫಿಗೆ ಉತ್ತಮ ದರ ಸಿಗಲು ಸಾಧ್ಯವಿದೆ ಎಂದು ವಿಶ್ವ ಕಾಫಿ ಸಂಘಟನೆಯ ಉಪ ನಿರ್ದೇಶಕ ಬ್ರೆಜಿಲ್ನ ಜೋಸ್ ಸೆಟ್ಟೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಪ್ರಥಮ ಬಾರಿಗೆ ಭಾರತದ ಕಾಫಿ ತೋಟ ವೀಕ್ಷಣೆಗಾಗಿ ಕೊಡಗಿಗೆ ಭೇಟಿ ನೀಡಿದ ಅವರು ಪಾಲಿಬೆಟ್ಟ ಟಾಟಾ ಕಾಫಿ ಸಂಸ್ಥೆಯ ತಣ್ಣೀರುಹಳ್ಳ ಬಂಗಲೆಯಲ್ಲಿ ‘ಶಕ್ತಿ’ಯೊಂದಿಗೆ ಅನಿಸಿಕೆ ಹಂಚಿಕೊಂಡರು.
ಅವರು ಪಾಲಿಬೆಟ್ಟ ಟಾಟಾ ಸಮೂಹದ ಕಾಫಿ ತೋಟ ನೋಡಿ ಮರದ ನೆರಳು ಆಧಾರಿತ ಕಾಫಿ ಕೃಷಿ ಪದ್ಧತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬ್ರೆಜಿಲ್ನಲ್ಲಿ ಮರದ ನೆರಳು ಆಧಾರಿತ ಕಾಫಿ ಉತ್ಪಾದನೆ ಮಾಡುತ್ತಿಲ್ಲ. ಸೂರ್ಯನ ಕಿರಣಗಳು ನೇರವಾಗಿ ಕಾಫಿ ಗಿಡದ ಮೇಲೆ ಬೀಳುತ್ತವೆ ಎಂದು ವಿವರಿಸಿದರು.
ವಿಶ್ವದಲ್ಲಿಯೇ ಅರೇಬಿಕಾ ಉತ್ಪಾದನೆಯಲ್ಲಿ ಬ್ರೆಜಿಲ್ ಪ್ರಥಮ ಸ್ಥಾನದಲ್ಲಿದೆ, ರೋಬಸ್ಟಾ ಕಾಫಿ ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎಂದು ಅಂಕಿ ಅಂಶ ನೀಡಿದ ಅವರು ವಾರ್ಷಿಕ ಸರಾಸರಿ 42 ಮಿಲಿಯನ್ ಚೀಲ ಅರೇಬಿಕಾ ಹಾಗೂ 17 ಮಿಲಿಯನ್ ಚೀಲ ರೋಬಸ್ಟಾ ಉತ್ಪಾದನೆ ಮಾಡುತ್ತಿರುವದಾಗಿ ಹೇಳಿದರು.
ಬ್ರೆಜಿಲ್ನಲ್ಲಿ ಶೇ.40 ಭಾಗ ಕಾಫಿ ಆಂತರಿಕ ಬಳಕೆಗೆ ಬಳಸಲಾಗುತ್ತಿದ್ದು ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ, ಭಾರತದಲ್ಲಿ ಶೇ.63 ರಷ್ಟು ಗ್ರೀನ್ ಕಾಫಿ ರಫ್ತಾಗುತ್ತಿದ್ದು, ಇಲ್ಲಿನ ಇನ್ಸ್ಟಂಟ್ ಕಾಫಿಯೂ ಹೊರದೇಶದಲ್ಲಿ ಲಭ್ಯ. ಇಲ್ಲಿನ ಆಂತರಿಕ ಕಾಫಿ ಬಳಕೆ ವೃದ್ಧಿಸದಿದ್ದಲ್ಲಿ ಕಾಫಿ ಉದ್ಯಮ ಭವಿಷ್ಯದಲ್ಲಿ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಬ್ರೆಜಿಲ್ ಶೇ.90 ಗ್ರೀನ್ಕಾಫಿಯನ್ನು ರಫ್ತು ಮಾಡುತ್ತದೆ ಎಂದು ವಿವರಿಸಿದರು.
ವಿಶ್ವದಲ್ಲಿ ನಮ್ಮ ಸಂಘಟನೆಯೊಂದಿಗೆ 44 ಕಾಫಿ ಉತ್ಪಾದಕಾ ರಾಷ್ಟ್ರಗಳು ಗುರುತಿಸಿಕೊಂಡಿದ್ದು ವಿಶ್ವದ ಶೇ.98 ರಷ್ಟು ಉತ್ಪಾದನೆಯನ್ನು ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳೂ ಕಾಫಿ ಉದ್ಯಮದ ಸಮತೋಲನ ಕಾಪಾಡಿಕೊಳ್ಳಲು ಒಗ್ಗೂಡುವ ಅಗತ್ಯವಿದೆ ಎಂದು ನುಡಿದರು.
ಏಷಿಯಾ ಖಂಡದಲ್ಲಿ ಕಾಫಿ ಬಳಕೆ ಅಧಿಕವಾದಲ್ಲಿ ವಿಶ್ವ ಕಾಫಿ ಮಾರುಕಟ್ಟೆಯಲ್ಲಿ ಕಾಫಿ ದರ ವೃದ್ಧಿಯಾಗಲಿದೆ ಎಂದು ಹೇಳಿದ ಅವರು ಇದೇ ಪ್ರಥಮ ಬಾರಿಗೆ ಏಷಿಯಾದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ 2020ನೇ ಇಸವಿಯಲ್ಲಿ 5ನೇ ವಿಶ್ವ ಕಾಫಿ ಸಮಾವೇಶ ನಡೆಯಲಿದ್ದು, ಇಲ್ಲಿನ ಕಾಫಿ ಬೆಳೆಯುವ ಪ್ರದೇಶದ ಎಲ್ಲ ಬೆಳೆಗಾರರು ಇದರ ಲಾಭ ಹೊಂದಿಕೊಳ್ಳಲು ಕಿವಿಮಾತು ಹೇಳಿದರು.
ಅಂತರಾಷ್ಟ್ರೀಯ ಕಾಫಿ ಸಂಘಟನೆ ಉಪ ನಿರ್ದೇಶಕರ ಆಪ್ತ ಕಾರ್ಯದರ್ಶಿ ಲಂಡನ್ನ ಹಮೀದಾ ಇಬ್ರಾಹಿಂ ಅವರೂ ಆಗಮಿಸಿದ್ದು ಇಲ್ಲಿನ ಕಾಫಿ ತೋಟವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜೋಸ್ ಸೆಟ್ಟೆ ಹಾಗೂ ಹಮೀದಾ ಇಬ್ರಾಹಿಂ ಅವರೊಂದಿಗೆ ಕಾಫಿ ಮಂಡಳಿಯ ಸಹಾಯಕ ಕಾರ್ಯದರ್ಶಿ ಟಿ. ತಿಮ್ಮೇಗೌಡ ಅವರೂ ಭೇಟಿ ನೀಡಿದರು.