ನಾಪೋಕ್ಲು, ಜ. 21: ಪ್ರತಿಯೊಬ್ಬರೂ ಧಾರ್ಮಿಕ, ಲೌಕಿಕ ಶಿಕ್ಷಣ ಪಡೆಯುವ ಮೂಲಕ ಸಮಾಜಕ್ಕೆ ಶಾಂತಿ, ಸಾಮರಸ್ಯ ಮತ್ತು ಪ್ರೀತಿಯ ಸಂದೇಶ ಸಾರಬೇಕೆಂದು ಸಚಿವ ಯು.ಟಿ. ಖಾದರ್ ಕರೆ ನೀಡಿದ್ದಾರೆ.
ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ವತಿಯಿಂದ ಇಲ್ಲಿಗೆ ಸಮೀಪದ ಕೊಟ್ಟಮುಡಿ ಮರ್ಕಝುಲ್ ಹಿದಾಯದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಪ್ರತಿಭೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಸ್ಎಸ್ಎಫ್ ಸಂಘಟನೆ ಹೋಬಳಿ, ವಲಯ ಮಟ್ಟದಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಸ್ಲಾಂನ ಧಾರ್ಮಿಕ ವಿಚಾರಗಳನ್ನು ಯುವಪೀಳಿಗೆಗೆ ಮನವರಿಕೆ ಮಾಡಿಕೊಡಬೇಕು ಆ ಮೂಲಕ ಧಾರ್ಮಿಕ ಯುವ ಪ್ರತಿಭೆಗಳನ್ನು ಗುರುತಿಸಿ ಸಮುದಾಯಕ್ಕೆ ಕೊಡುಗೆಯಾಗಿ ನೀಡಬೇಕೆಂದು ಸಲಹೆ ನೀಡಿದರು.
ಪ್ರತಿಯೊಬ್ಬರೂ ಧಾರ್ಮಿಕ ಸಂಘಟನೆ ಮತ್ತು ಲೌಕಿಕ ವಿಚಾರಧಾರೆ ಗಳನ್ನು ಮೈಗೂಡಿಸಿಕೊಂಡು ದೇಶದ ಆಸ್ತಿಯಾಗಿ ಹೊರಹೊಮ್ಮಬೇಕು ಎಂದರು.
ಬೆಂಗಳೂರು ವಕ್ಫ್ ಬೋರ್ಡ್ನ ಸದಸ್ಯ ಶಾಫಿ ಸಅದಿ ಮಾತನಾಡಿ, ವಿವಿಧ ರಾಜ್ಯ, ಜಿಲ್ಲೆಗಳ ಮೂಲೆಗಳಿಂದ ಯುವಪೀಳಿಗೆಯನ್ನು ಒಂದೇ ವೇದಿಕೆಯಡಿಯಲ್ಲಿ ಸೇರಿಸುವ ಕೆಲಸವನ್ನು ಎಸ್ಎಸ್ಎಫ್ ಮಾಡಿದಲ್ಲದೇ, ಯುವಪ್ರತಿಭೆಗಳಿಗೆ ಸ್ವತಂತ್ರವಾಗಿ ತಮ್ಮ ಪ್ರತಿಭೆ ಬೆಳಗಿಸಲು ಅವಕಾಶ ಕಲ್ಪಿಸಿದೆ. ಇಸ್ಲಾಂನ ಅನುಯಾಯಿಗಳಾಗಿ, ಇಸ್ಲಾಂನ ಶಿಷ್ಟಾಚಾರಗಳನ್ನು ಯುವ ಸಮುದಾಯ ಅಳವಡಿಸಿಕೊಂಡು ಕಲೆ, ಸಂಸ್ಕøತಿ, ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಬೇಕೆಂದು ಕರೆ ನೀಡಿದರು.
ದಕ್ಷಿಣ ಕನ್ನಡ ವಕ್ಫ್ ಬೋರ್ಡ್ ಅಧ್ಯಕ್ಷ ಕಳತ್ತೂರು ಮೋಣು ಹಾಜಿ ಮಾತನಾಡಿ, ಇಸ್ಲಾಂನ ಅನುಯಾಯಿಗಳೆಲ್ಲರೂ ಏಕತೆ, ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಎಸ್ಎಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ವಹಿಸಿದ್ದರು
ಕರ್ನಾಟಕ ರಾಜ್ಯ ಎಸ್ವೈ ಎಸ್ ರಾಜ್ಯಾಧ್ಯಕ್ಷ ಜಿ.ಎಂ. ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ರಶೀದ್ ರುಸುರಿ ಸಖಾಫಿ, ಕರ್ನಾಟಕ ರಾಜ್ಯ ಸುನ್ನಿಜಮಾಯತ್ನ ಪ್ರಧಾನ ಕಾರ್ಯದರ್ಶಿ ಅಬೂರಸ್ಯನ್ ಮದನಿ ಕೊಡಗು ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ಅಬ್ದುಲ್ ರೆಹಮಾನ್, ಮಹಮದ್ ಉಸ್ತಾದ್ ಎಡಪಾಲ, ಉಸ್ಮಾನ್ ನಾಪೋಕ್ಲು, ಕೊಟ್ಟಮುಡಿಯ ಅಬೂಬಕರ್ ಹಂಸ, ಶಾಫಿ, ಕೊಡಗು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎಂ.ಬಿ. ಹಮೀದ್ ಪಾಲ್ಗೊಂಡಿದ್ದರು.